ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಕಳೆದ ವರ್ಷ ಹಿರಿಯ ಅಧಿಕಾರಿಗಳ ಕಿರುಕುಳದ ವಿರುದ್ಧ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದ ಶಿರಸಿ ಅಬಕಾರಿ ಇಲಾಖೆಯ ವಾಹನ ಚಾಲಕ ದುರ್ಗಪ್ಪ ಗಾಯಕವಾಡ (45) ಇದೀಗ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿನ್ನೆಲೆ ಹೊಸ ಕುತೂಹಲ ಹುಟ್ಟಿಸಿದೆ.
ಮರಾಠಿಕೊಪ್ಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದುರ್ಗಪ್ಪ ಗಾಯಕವಾಡ ಅವರು ಅಕ್ಟೋಬರ್ 23 ರಂದು ಅಸ್ಪಷ್ಟ ಪರಿಸ್ಥಿತಿಯಲ್ಲಿ ಮೃತ ಪಟ್ಟಿದ್ದು, ಅವರ ಕುಟುಂಬದವರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಶಿರಸಿ ಹೊಸ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ದುರ್ಗಪ್ಪ ಗಾಯಕವಾಡ ಅವರು ಅಬಕಾರಿ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಆಗಾಗ ಮದ್ಯ ಸೇವಿಸಿ ಕಚೇರಿಗೆ ಬರುವವರಾಗಿದ್ದರೆಂದು ಮೂಲಗಳು ಹೇಳುತ್ತಿವೆ. ಈ ಹಿನ್ನೆಲೆ ಅಧಿಕಾರಿಗಳು ಅವರಿಗೆ ಬುದ್ದಿ ಹೇಳಿದ್ದರು. ಉಪಅಧೀಕ್ಷಕ ಶಿವಪ್ಪ ಎಚ್.ಎಸ್. ಅವರು ದುರ್ಗಪ್ಪನ ವರ್ತನೆ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ ಬಳಿಕ 2024ರ ಸೆಪ್ಟೆಂಬರ್ 19ರಂದು ನೋಟಿಸ್ ನೀಡಿದ್ದರು.
ನೋಟಿಸ್ ನೋಡಿ ಸಿಟ್ಟಾದ ದುರ್ಗಪ್ಪ ಅವರು “ನಾನು ಸಾವಿಗೆ ಶರಣಾಗುವೆ, ನನ್ನ ಸಾವಿಗೆ ಅಧಿಕಾರಿಗಳೇ ಕಾರಣ” ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದ್ದರು. ನಂತರ ಶಿವಪ್ಪ ಎಚ್.ಎಸ್. ಅವರು ಈ ಬೆದರಿಕೆ ಪತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದೀಗ ಸುಮಾರು ಒಂದು ವರ್ಷ ಬಳಿಕ ದುರ್ಗಪ್ಪ ಗಾಯಕವಾಡ ಅವರು ಸಾವನ್ನಪ್ಪಿರುವುದು ಹೊಸ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಮೃತರ ಮಗ ಕಾರ್ತಿಕ ಗಾಯಕವಾಡ “ಅಪ್ಪ ವಿಪರೀತ ಸರಾಯಿ ಕುಡಿಯುತ್ತಿದ್ದರು, ಆದರೆ ಅವರ ಸಾವು ಸಂಶಯಾಸ್ಪದವಾಗಿದೆ” ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಿರಸಿ ಅಬಕಾರಿ ಇಲಾಖೆಯಲ್ಲಿ ಮತ್ತೆ ಆತ್ಮಹತ್ಯೆ ಬೆದರಿಕೆ ಪತ್ರದ ನೆರಳು ಚರ್ಚೆಗೆ ಗ್ರಾಸವಾಗಿದೆ!


