ಬೆಂಗಳೂರು: ಗ್ರಾಹಕರಿಗೆ ಹಬ್ಬದ ಖುಷಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ತನ್ನ ನಂದಿನಿ ಹಾಲಿನ ಉತ್ಪನ್ನಗಳ ದರ ಕಡಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಕೇಂದ್ರ ಸರಕಾರ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12ರಿಂದ 5ಕ್ಕೆ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ನಂದಿನಿ ಬ್ರಾಂಡ್‌ನ 21 ಉತ್ಪನ್ನಗಳ ದರವನ್ನು ಕೆಎಂಎಫ್ ತಗ್ಗಿಸಿದೆ.

ಇದರಿಂದ ‘ಗುಡ್‌ಲೈಫ್’ ಹಾಲಿನ ದರ ಪ್ರತಿ ಲೀಟರ್‌ಗೆ ಎರಡು ರೂ. ಇಳಿಕೆಯಾಗಿ ಈಗಿನಿಂದ 68 ರೂ.ಗೆ ಲಭ್ಯವಾಗಲಿದೆ. ತುಪ್ಪದ ದರವು ಪ್ರತಿ ಲೀಟರ್‌ಗೆ 40 ರೂ. ಇಳಿಕೆಯಾಗಿದೆ. ಬೆಣ್ಣೆಯ 500 ಗ್ರಾಂ ಪ್ಯಾಕೆಟ್‌ಗೆ 19 ರೂ. ಕಡಿಮೆಯಾಗಿದ್ದು, ಪನ್ನೀರ್‌ 1 ಕೆ.ಜಿ ಪ್ಯಾಕೆಟ್‌ ದರವು 17 ರೂ. ಇಳಿಕೆಯಾಗಿದೆ.

“ದಸರಾ ಹಬ್ಬದ ಉಡುಗೊರೆಯಾಗಿ ಈ ದರ ಇಳಿಕೆಯನ್ನು ಮಾಡುತ್ತಿದ್ದೇವೆ. ನಂದಿನಿ ಹಾಲಿನ ಉತ್ಪನ್ನಗಳ ದರದಲ್ಲಿ ಮಾತ್ರ ಇಳಿಕೆ ಆಗಿದೆ. ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ,” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ಹೊಸ ದರಗಳು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದ್ದು, ಇದೇ ಸಂದರ್ಭದಲ್ಲಿ ಗುಜರಾತ್‌ನ ಅಮೂಲ್ ಸಹ ತನ್ನ 700ಕ್ಕೂ ಅಧಿಕ ಹಾಲಿನ ಉತ್ಪನ್ನಗಳ ದರ ಇಳಿಕೆಗೆ ಘೋಷಣೆ ಮಾಡಿದೆ.

 

 

Please Share: