ಮುಂಡಗೋಡ: ತಾಲೂಕಿನ ಕಾತುರ ಗ್ರಾಮದಲ್ಲಿ ನಕಲಿ ಆಸ್ಪತ್ರೆಯ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ಬುಧವಾರ ಮತ್ತೊಮ್ಮೆ ದಾಳಿ ನಡೆಸಿ ಬೀಗ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಕೆ.ಪಿ.ಎಮ್.ಇ (KPME) ನೋಂದಣಿ ಇಲ್ಲದೆ ರತ್ನಮ್ಮ ಎಂಬುವರು ಆಸ್ಪತ್ರೆ ನಡೆಸುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಅನೇಕ ಬಾರಿ ದೂರುಗಳು ಹರಿದು ಬಂದಿದ್ದವು. ಹಿಂದೆಯೂ ಇದೇ ಆಸ್ಪತ್ರೆಗೆ ದಾಳಿ ನಡೆಸಿ ಬೀಗ ಹಾಕಲಾಗಿತ್ತು. ಅದೇ ಸಮಯದಲ್ಲಿ ಅನುಮತಿ ಇಲ್ಲದೆ ಮುಂದಿನ ದಿನಗಳಲ್ಲಿ ಆಸ್ಪತ್ರೆ ಆರಂಭಿಸುವುದಿಲ್ಲವೆಂದು ಮುಚ್ಚಳಿಕೆ ಪತ್ರ ಸಹ ಬರೆದು ಕೊಟ್ಟಿದ್ದರು.

ಆದರೂ ಸಹ ಇಲಾಖೆ ಗಮನಕ್ಕೆ ತರದೆ ಪುನಃ ಆಸ್ಪತ್ರೆಗೆ ಚಾಲನೆ ನೀಡಿದ ಕಾರಣ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನೀರಜ್ ಬಿ.ವಿ, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಆಡಳಿತ ವೈದ್ಯಾಧಿಕಾರಿ ಭರತ್ ಡಿ.ಟಿ ನೇತೃತ್ವದ ತಂಡ ಭೇಟಿ ನೀಡಿ ಮತ್ತೆ ಬೀಗ ಹಾಕಿದೆ.

ನಕಲಿ ಆಸ್ಪತ್ರೆ ಪತ್ತೆಯಾದ ಸಂದರ್ಭದಲ್ಲಿ ಮೊದಲಿಗೆ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುತ್ತದೆ. ನಂತರ ಮುಚ್ಚಳಿಕೆ ಪತ್ರ ಪಡೆದು ಆಸ್ಪತ್ರೆ ಮುಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ. ಈ ಕ್ರಮಗಳಿಗೂ ಮೀರಿ ಅನುಮತಿ ಪಡೆಯದೇ ಆಸ್ಪತ್ರೆ ಪುನಃ ಕಾರ್ಯನಿರ್ವಹಿಸಿದರೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲಾಗುತ್ತದೆ. ಈ ಹಿನ್ನೆಲೆ, ಕಾತೂರ ಗ್ರಾಮದ ರತ್ನಮ್ಮ ಮುಚ್ಚಳಿಕೆ ಪತ್ರದ ನಿಯಮ ಉಲ್ಲಂಘಿಸಿ ಆಸ್ಪತ್ರೆ ನಡೆಸಿರುವ ಕಾರಣ, ಈಗ ಡಿಸಿ ಕೋರ್ಟ್‌ಗೆ ಕೇಸು ದಾಖಲಾಗಿದೆ ಎಂದು ಡಿಎಚ್ಓ ಡಾ. ನೀರಜ್ ಬಿ.ವಿ ತಿಳಿಸಿದ್ದಾರೆ.

 

 

Please Share: