ಕಾರವಾರ: ಪ್ರವಾಸೋದ್ಯಮದಿಂದ ಹೆಸರುವಾಸಿಯಾದ ಕಾರವಾರ ನಗರದಲ್ಲಿ ಪ್ರವಾಸಿಗರ ಅಸಮರ್ಪಕ ನಡವಳಿಕೆ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಪ್ರವಾಸಿಗರು ತಮ್ಮ ವಾಹನಗಳ ಮೇಲೆ ಬಟ್ಟೆ ಬಿಚ್ಚಿ ಒಣಗಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಇದರಿಂದ ಸಾರ್ವಜನಿಕ ಸ್ಥಳದ ಗೌರವಕ್ಕೆ ಧಕ್ಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಟಾಗೋರ್ ಕಡಲತೀರದಲ್ಲಿ ಪ್ರವಾಸಿಗರಿಗೆ ಬಟ್ಟೆ ಬದಲಿಸಲು ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ, ಅನೇಕರು ಸಾರ್ವಜನಿಕ ಸ್ಥಳದಲ್ಲೇ ಬಟ್ಟೆ ಬದಲಿಸುವ ಸ್ಥಿತಿ ಎದುರಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಮುಜುಗರ ಉಂಟಾಗುತ್ತಿದೆ. ಪ್ರವಾಸಿಗರು ವಾಹನಗಳ ಮೇಲೆ ಖಾಸಗಿ ಉಡುಪುಗಳನ್ನು ಒಣಗಿಸಲು ಇಡುವುದು ಸಹ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯರು ಪ್ರವಾಸೋದ್ಯಮ ಇಲಾಖೆಯು ಟಾಗೋರ್ ಕಡಲತೀರದಲ್ಲಿ ಬಟ್ಟೆ ಬದಲಾವಣೆಗೆ ಶೆಡ್, ವಾಶ್‌ರೂಮ್ ಹಾಗೂ ಬೇಸಿಕ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರವಾಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಶಿಸ್ತಿನ ಕೊರತೆಯಿಂದ ನಗರ ಮತ್ತು ಕಡಲತೀರದ ಶುದ್ಧತೆಯ ಮೇಲೆ ದುಷ್ಪರಿಣಾಮ ಬೀಳಬಹುದೆಂಬ ಆತಂಕ ವ್ಯಕ್ತವಾಗಿದೆ.
ಪ್ರವಾಸಿಗರನ್ನು ಆಕರ್ಷಿಸಲು ಬಂದರೂ, ಅವರಿಗೆ ಸೂಕ್ತ ಸೌಲಭ್ಯ ಒದಗಿಸಿ ನಿಯಮ-ನಿರ್ಧಾರಗಳನ್ನು ಪಾಲನೆಗೊಳಿಸುವ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


