ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ವಿಶ್ರಾಂತಿಯ ವೀಕೆಂಡ್‌ ಟ್ರಿಪ್‌ಗೆ ಕರಾವಳಿಗೆ ಬಂದ ಯುವ ವೈದ್ಯನಿಗೆ ಅಲೆಗಳ ಅಬ್ಬರವೇ ಜೀವ ಕಸಿದುಕೊಂಡಿದೆ! ತಾಲೂಕಿನ ಕರ್ಕಿ ಪಾವಿನಕುರ್ವದ ಸಮುದ್ರತೀರದಲ್ಲಿ ಶನಿವಾರ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತನನ್ನು ಡಾ. ಪುನೀತ ವೆಂಕಟರಮಣ (26) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ವೈದೇವಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಪುನೀತ, ನಾಲ್ವರು ಮಿತ್ರರ ಜೊತೆ ಉಲ್ಲಾಸ ಪ್ರವಾಸಕ್ಕಾಗಿ ಕರಾವಳಿಗೆ ಆಗಮಿಸಿದ್ದರು.

ಶನಿವಾರ ತಂಡ ಕರ್ಕಿ ಕಡಲತೀರ ತಲುಪಿದ್ದು, ಅಲೆಗಳ ಶಬ್ದ, ನೀರಿನ ಆಕರ್ಷಣೆಗೆ ಮನಸೋತು ಎಲ್ಲರೂ ಸಮುದ್ರದೊಳಗೆ ಇಳಿದರು. ಆದರೆ ಕೆಲವೇ ಕ್ಷಣಗಳಲ್ಲಿ ಬಲವಾದ ಅಲೆಗಳು ಬಂದಾಗ ಪುನೀತರನ್ನು ನೀರಿನ ಸೆಳೆತ ಒಳಗೆಳೆದು ಕೊಂಡುಹೋದವು. ಸ್ನೇಹಿತರು ಗಾಬರಿಗೊಂಡು ರಕ್ಷಿಸಲು ಪ್ರಯತ್ನಿಸಿದರೂ ಫಲವಿಲ್ಲದೆ ಕಣ್ಣೆದುರೇ ಪುನೀತರು ಕಾಣೆಯಾಗಿದರು.

ಸ್ಥಳೀಯ ಮೀನುಗಾರರು ಹಾಗೂ ಹೊನ್ನಾವರ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಆರಂಭಿಸಿದರು. ಅಲೆಗಳ ಅಬ್ಬರದ ಮಧ್ಯೆ ಹಲವು ಗಂಟೆಗಳ ಬಳಿಕ ಮೃತದೇಹ ಪತ್ತೆಯಾಯಿತು.

ಘಟನೆ ಸ್ಥಳವನ್ನು ವೀಕ್ಷಿಸಿದ ಪೊಲೀಸರು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯರು ಹೇಳುವಂತೆ, ಪಾವಿನಕುರ್ವದ ಈ ಕಡಲತೀರದಲ್ಲಿ ನೀರಿನ ಸೆಳೆತ ಅಪಾಯಕಾರಿಯಾಗಿದ್ದು, ಮುನ್ನೆಚ್ಚರಿಕೆ ಇಲ್ಲದೇ ನೀರಿಗೆ ಇಳಿದರೆ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚು.

ಯುವ ವೈದ್ಯನ ಅಕಾಲಿಕ ಮರಣದಿಂದ ಕುಟುಂಬ ಹಾಗೂ ಸ್ನೇಹಿತ ವಲಯ ಶಾಕ್‌ನಲ್ಲಿದೆ. ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧನಾಗಿದ್ದ ವೈದ್ಯನ ಕನಸುಗಳು ಕಡಲಿನ ಅಲೆಗಳ ಜೊತೆ ಮಾಯವಾದಂತಾಗಿದೆ.

 

Please Share: