ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಹೆಂಡತಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದ ಆರೋಪದ ಮೇಲೆ ದಾಖಲಾದ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ತಾಲೂಕಿನ ಕೆ.ಎಚ್.ಬಿ ಕಾಲೋನಿಯ ಅರ್ಫಾಜ್ ಮಿರ್ಜಾನಕರ್ ಈತನನ್ನು ಮುಂಡಗೋಡ ಪೊಲೀಸರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಹಿತಿ ಪ್ರಕಾರ, ಅರ್ಫಾಜ್ ಮಿರ್ಜಾನಕರ್ ತಮ್ಮ ಪತ್ನಿಯನ್ನು ವಿವಾಹದ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದನು. ಪತ್ನಿಯು ಪೊಲೀಸರಿಗೆ ನೀಡಿದ ದೂರು ಪ್ರಕಾರ, ಆರೋಪಿ ಹಾಗೂ ಅವರ ಕುಟುಂಬದವರು ಅವಾಚ್ಯವಾಗಿ ಬೈದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರ ಜೊತೆಗೆ, ಉಡುಗೊರೆಯಾಗಿ ನೀಡಿದ ಬಂಗಾರದ ಆಭರಣಗಳನ್ನು ಕಸಿದುಕೊಂಡು ಮನೆಯಿಂದ ಹೊರಹಾಕಿದ್ದರು. 2022ರ ಡಿಸೆಂಬರ್ 17ರಂದು ಜೀವ ಬೆದರಿಕೆ ನೀಡಿದ ಘಟನೆ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ, ಆರೋಪಿತ ಅರ್ಫಾಜ್ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಯಾಗಿದ್ದನು. ಆತ ವಿದೇಶದಲ್ಲಿ ಅಡಗಿದ್ದ ಕಾರಣ, ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ರವಿವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ, ಪೊಲೀಸರಿಂದ ಬಂಧಿತನಾಗಿದ್ದಾನೆ.

ಈ ಕಾರ್ಯಾಚರಣೆ ಎಸ್‌ಪಿ ದೀಪನ್ ಎಂ.ಎನ್., ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿ‌ಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್, ಪಿ‌ಎಸ್‌ಐ ಯಲ್ಲಾಲಿಂಗ್ ಕುನ್ನೂರ ಮತ್ತು ಸಿಬ್ಬಂದಿಗಳಾದ ಮಂಜಪ್ಪ ಚಿಂಚಲಿ, ರಪೈ ಬಾಷಾ, ಕೆಂಚಪ್ಪಾ ಜಾಲಿಕಟ್ಟಿ ಅವರ ತಂಡ ಯಶಸ್ವಿಯಾಗಿ ನಡೆಸಿದೆ.

 

Please Share: