ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಮನಸ್ಸು ಕದಲಿಸುವ ದೃಶ್ಯ ಗೋಕರ್ಣದ ಸೂರ್ಯ ರೆಸಾರ್ಟ್ ಸಮೀಪದ ಕಡಲ ತೀರದಲ್ಲಿ ಕಂಡುಬಂದಿತು!
ಅಲೆಗಳ ಅಬ್ಬರದಲ್ಲಿ ತೇಲಿ ಬಂದ ಸುಮಾರು ಆರು ಅಡಿ ಉದ್ದದ ಡಾಲ್ಫಿನ್ ತೀರಕ್ಕೆ ಅಪ್ಪಳಿಸಿ ಅಸ್ವಸ್ಥಗೊಂಡು ಚಡಪಡಿಸುತ್ತಿತ್ತು. ಉಸಿರಾಟಕ್ಕೂ ಕಷ್ಟಪಡುತ್ತಿದ್ದ ಸಮುದ್ರದ ಅತಿಥಿಯ ಜೀವ ಕ್ಷಣಕ್ಷಣಕ್ಕೂ ಅಪಾಯದಲ್ಲಿತ್ತು.
ಆ ವೇಳೆ ರೆಸಾರ್ಟ್ ಮಾಲೀಕ ಯಶ್ವಂತ ಮಹಾಬಲೇಶ್ವರ ಗೌಡ ಹಾಗೂ ಯುವಕ ಮಾದು ಗೌಡ ತಕ್ಷಣ ಧಾವಿಸಿ ಮಾನವೀಯತೆ ಮೆರೆದರು. ಅಲೆಗಳ ಪ್ರಚಂಡತೆಗೆ ಲೆಕ್ಕಿಸದೇ, ಸ್ಥಳೀಯರ ಸಹಾಯದಿಂದ ಡಾಲ್ಫಿನ್ ಅನ್ನು ಎಚ್ಚರಿಕೆಯಿಂದ ಸಮುದ್ರದ ಆಳಕ್ಕೆ ಎಳೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಡುವಲ್ಲಿ ಯಶಸ್ವಿಯಾದರು.
ಈ ಹೃದಯಸ್ಪರ್ಶಿ ದೃಶ್ಯವನ್ನು ವೀಕ್ಷಿಸಲು ಕಡಲ ತೀರದಲ್ಲಿ ಜನರು ಗುಂಪುಗೂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ಯುವಕರ ಸಾಹಸ ಮತ್ತು ಮಾನವೀಯತೆ ಪ್ರಶಂಸೆಗೆ ಪಾತ್ರವಾಗಿದ್ದು, “ನಿಜವಾದ ಹೀರೋಗಳು ನೀರಿನಲ್ಲೇ ಇದ್ದಾರೆ!” ಎಂಬ ಶೀರ್ಷಿಕೆಯಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.
ಗೋಕರ್ಣದ ಅಲೆಗಳು ಕೇವಲ ಸೌಂದರ್ಯವನ್ನೇ ಅಲ್ಲ, ಮಾನವೀಯತೆಯ ಅಲೆಗಳನ್ನೂ ಎಬ್ಬಿಸಿದ ದಿನ ಇದು!

 
							





 
			 
			 
			 
			 
		 
			 
			 
			 
			