ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ವಿದೇಶಿ ಕರೆನ್ಸಿಯ ಅಕ್ರಮ ವಹಿವಾಟು ನಡೆಸುತ್ತಿದ್ದ ಅಪರೂಪದ ಜಾಲವನ್ನು ಭಟ್ಕಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ಗೋವಾದಿಂದ ಸ್ಕೂಟರ್‌ನಲ್ಲಿ THE UNITED STATES OF AMERICA ಎಂದು ಬರೆದ 156 ನೋಟುಗಳನ್ನು, ಅಂದಾಜು 8 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಎಂದು ಹೇಳಿಕೊಂಡು ಸಾಗಿಸುತ್ತಿದ್ದ ಆರೋಪಿಯು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಭಟ್ಕಳದ ಚಿನ್ನದಪಳ್ಳಿ ಪ್ರದೇಶದ ನಿವಾಸಿ ರುಕ್ಮುದ್ದಿನ್ ಸುಲ್ತಾನ್ ಭಾಷಾ ಎನ್ನುವವರು ಅಕ್ಟೋಬರ್ 22ರ ರಾತ್ರಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ, ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ. ಅವರ ನೇತೃತ್ವದ ತಂಡ ತಪಾಸಣೆ ನಡೆಸಿದೆ. ಆಗ ಸ್ಕೂಟರ್‌ನಿಂದ ದೊಡ್ಡ ಪ್ರಮಾಣದ ವಿದೇಶಿ ನೋಟುಗಳು ಪತ್ತೆಯಾಗಿದೆ.
ಪೊಲೀಸರು ವಿದೇಶಿ ಕರೆನ್ಸಿ ಸಾಗಾಟಕ್ಕೆ ಅಗತ್ಯವಾದ ಪರವಾನಿಗೆ ಕೇಳಿದರೂ, ಆರೋಪಿಯ ಬಳಿ ಯಾವುದೇ ಅನುಮತಿ ಪತ್ರ ಇರಲಿಲ್ಲ. ತೀವ್ರ ವಿಚಾರಣೆ ವೇಳೆ ರುಕ್ಮುದ್ದಿನ್, “ಈ ನೋಟುಗಳನ್ನು ಭಟ್ಕಳದ ಕಪ್ಪಾ ಮಜೀದ್ ಅವರಿಗೆ ನೀಡಲು ತರುತ್ತಿದ್ದೆ” ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಇದೀಗ, ಈ ಇಬ್ಬರು ಯಾವ ಉದ್ದೇಶಕ್ಕಾಗಿ ವಿದೇಶಿ ನೋಟುಗಳ ಹಿಂದೆ ಬಿದ್ದರು? ನೋಟುಗಳು ನಿಜವೇ ಅಥವಾ ನಕಲಾ? ಇವರ ಹಿಂದೆ ಇನ್ನೂ ಯಾರಾದರೂ ಇದ್ದಾರಾ? ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.
ಭಟ್ಕಳ ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, ಈ ಅಚ್ಚರಿಯ ವಿದೇಶಿ ನೋಟು ಜಾಲದ ನಿಜಸ್ವರೂಪ ಪತ್ತೆಗೆ ತನಿಖೆ ಮುಂದುವರಿದಿದೆ.
ಭಟ್ಕಳದ ಶಾಂತ ಪಟ್ಟಣದಲ್ಲಿ ಅಂತರರಾಷ್ಟ್ರೀಯ ಕರೆನ್ಸಿ ಡ್ರಾಮಾ— ನಿಜವೇ? ನಕಲಾ? ಪೊಲೀಸರು ಗಾಢ ತನಿಖೆಯಲ್ಲಿ!


