ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಡಿ.22 ರಿಂದ 28 ರವೆರಗೆ ನಡೆಯುವ ಕರಾವಳಿ ಉತ್ಸವ-2025 ನ್ನು ವಿಜೃಂಭಣೆಯಿದ ಆಚರಿಸಲು ಬೇಕಾದ ಸಕಲ ಸಿದ್ದತೆಯನ್ನು ಕೈಗೊಳ್ಳುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಮಂಗಳವಾರ ವಿಡಿಯೋ ಕಾನ್ಫರನ್ಸ ಮೂಲಕ ನಡೆದ ಸಭೆಯಲ್ಲಿಭಾಗವಹಿಸಿ ಮಾತನಾಡಿದರು.
ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆ ಶಿಷ್ಠಾಚಾರದಂತೆ ಅಂತಿಮವಾಗಿದ್ದರೆ, ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡುವಂತೆ ತಿಳಿಸಿದ ಅವರು, ಸಮಯಾವಕಾಶ ಕಡಿಮೆ ಇರುವದರಿಂದ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾನೇ ಖುದ್ದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುವುದು ಎಂದರು.
ಶಿಷ್ಠಾಚಾರದoತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಆಮಂತ್ರಣ ಪತ್ರಿಕೆ ನೀಡಲು ಕ್ರಮವಹಿಸುವಂತೆ ತಿಳಿಸಿದ ಅವರು, ಯಾವುದೇ ಗೊಂದಲಗಳಿಗೆ ಅವಕಾಶ ಕಲ್ಪಿಸದಂತೆ ಎಲ್ಲಾ ಸಮಿತಿಯ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಮತ್ತು ಅಧಿಕಾರಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದ ಅವರು, ಉತ್ಸವಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.1 ಕೋಟಿ ಅನುದಾನ ನೀಡುವುದಾಗಿ ಮಂತ್ರಿಗಳು ತಿಳಿಸಿದ್ದು, ಇದರ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ.5 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಇವೆಂಟ್ ಮ್ಯಾನೇಜಮೆಂಟ್ ಅವರು ಕಾರ್ಯಕ್ರಮದ ಸಂಗೀತ ಪ್ರದರ್ಶನ ನೀಡಲು ಕಲಾವಿದರನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡಿದ್ದು, ಅದರಂತೆ ಡಿ.22 ರಂದು ಶಂಕರ ಮಹಾದೇವನ್, ಡಿ.23 ರಂದು ಮೀಕಾ ಸಿಂಗ್, ಡಿ.24 ರಂದು ಸೋನು ನಿಗಮ್, ಡಿ.25 ರಂದು ರಫ್ತಾರ್, ಡಿ.27 ರಂದು ಮಹಮ್ಮದ್ ದಾನೀಶ್, ಹಾಗೂ ಡಿ. 28 ರಂದು ದಲೇರಿ ಮೆಹಂದಿ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದು, ಡಿ.26 ರ ಕಾರ್ಯಕ್ರಮದ ಕಲಾವಿದರು ಅಂತಿಮವಾಗಬೇಕಿದೆ ಎಂದರು.
ಕರಾವಳಿ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತಂತೆ ಅಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಹಾಗೂ ಸಮಿತಿ ಸದಸ್ಯರಿಗೆ ಅವರ ಜವಾಬ್ದಾರಿ ಬಗ್ಗೆ ತಿಳಿಸಿಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಪ್ರತಿ ದಿನ ಸಂಜೆ 5.30 ಗಂಟೆಯಿAದ 7.30 ಗಂಟೆಯವರಗೆ ಅವಕಾಶ ನೀಡಲಾಗಿದ್ದು, ಸ್ಥಳೀಯ ಕಲಾವಿದರು ಈಗಲೂ ಅರ್ಜಿ ಸಲ್ಲಿಕೆ ಮಾಡುತ್ತಿರುವದರಿಂದ ಅವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಿವಿಧ ಸ್ಪರ್ಧೆಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.22 ರಂದು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವ ಗಣ್ಯರಿಗೆ ವೇದಿಕೆಗೆ ಸ್ವಾಗತಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ 15 ರಿಂದ 20 ಕಲಾ ತಂಡಗಳಿoದ ಮೆರವಣಿಗೆ, ಮೀನುಗಾರರ ದೀಪ ಮೇರವಣಿಗೆ, ಡಿ.23 ರಂದು ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಆಯ್ಕೆಯಾದ ಛಾಯಾಗ್ರಹಣ ಮತ್ತು ರೀಲ್ಸ್ಗಳನ್ನು ಕಾರ್ಯಕ್ರಮದ ಅoತಿಮ ದಿನದವರೆಗೂ ಪ್ರದರ್ಶನ ಮಾಡಲಾಗುವುದು ಡಿ.24 ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, 25 ರಂದು ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆಯು 3, 5 ಮತ್ತು 10 ಕಿ.ಮೀ. ವಿಭಾಗದಲ್ಲಿ ನಡೆಯಲಿದೆ. ಡಿ.26 ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು ಡಿ.27 ರಂದು ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.

