ಕರಾವಳಿ ವಾಯ್ಸ್ ನ್ಯೂಸ್

ಪಣಜಿ: ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದ ಕರಾವಳಿಯ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ನೌಕಾಪಡೆಯ ಧೈರ್ಯಶಾಲಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.

ಯೋಧರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಲು ಬಯಸುತ್ತಾರೆ. ಆದರೆ ನನ್ನ ದೃಷ್ಟಿಯಲ್ಲಿ ನೀವು ಎಲ್ಲರೂ ನನ್ನ ಕುಟುಂಬದವರೇ. ನಿಮ್ಮೊಂದಿಗೆ ಈ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ,” ಎಂದು ಹೇಳಿದರು.

ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯನ್ನು ಭಾರತದ ಶ್ರಮ, ಪ್ರತಿಭೆ ಮತ್ತು ಬದ್ಧತೆಗೆ ಸಾಕ್ಷಿಯೆಂದು ಶ್ಲಾಘಿಸಿದ ಮೋದಿ, “ಇದು ಕೇವಲ ಯುದ್ಧನೌಕೆಯಲ್ಲ, 21ನೇ ಶತಮಾನದ ಭಾರತವು ಸಾಧಿಸಬಲ್ಲ ಶಕ್ತಿ ಮತ್ತು ಸಾಮರ್ಥ್ಯದ ಚಿಹ್ನೆ,” ಎಂದರು.

ಯುದ್ಧನೌಕೆಯ ಉಪಕರಣಗಳು, ವಿಮಾನಗಳು ಹಾಗೂ ಜಲಾಂತರ್ಗಾಮಿ ನೌಕೆಗಳ ಸಾಮರ್ಥ್ಯವನ್ನು ಉಲ್ಲೇಖಿಸಿದ ಅವರು, “ಇವುಗಳಿಗಿಂತಲೂ ಹೆಚ್ಚಿನ ಶಕ್ತಿ ಯೋಧರ ಧೈರ್ಯದಲ್ಲಿದೆ. ನಿಮ್ಮ ಸಾಹಸ ಮತ್ತು ನಿಸ್ವಾರ್ಥ ಸೇವೆ ರಾಷ್ಟ್ರದ ನಿಜವಾದ ಬಲ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಪರೇಷನ್‌ ಸಿಂಧೂರದ ವೇಳೆ ಯೋಧರು ತೋರಿದ ಧೈರ್ಯ ಹಾಗೂ ಸಾಹಸವನ್ನು ಪ್ರಧಾನಿ ಮೋದಿ ವಿಶೇಷವಾಗಿ ಪ್ರಶಂಸಿಸಿದರು.

 

 

Please Share: