ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: “ಮೋಜು ಮಸ್ತಿಯಲ್ಲಿ ಕಾನೂನು ಮರೆತರೆ ಅಂತ್ಯ ಕಂಟಕ!” — ದೀಪಾವಳಿಯ ರಾತ್ರಿಯಲ್ಲಿ ಬೈಕ್ ಚಲಾಯಿಸುತ್ತಲೇ ಪಟಾಕಿ ಸಿಡಿಸಿದ ಇಬ್ಬರು ಯುವಕರು ಇದೀಗ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ!

ನಂದನಗದ್ದಾದ ಸಮಾದೇವಿ ದೇವಸ್ಥಾನದ ಆದಿತ್ಯ ಸಂದೀಪ ಹುಲ್ಗೇಕರ್ ಮತ್ತು ವಿದೀಶ ಸಂದೀಪ ಜೋಗಳೇಕರ್ ಎಂಬ ಯುವಕರು ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಲೇ ರಾಕೇಟ್ ಪಟಾಕಿ ಹಚ್ಚಿ ರೋಡ್‌ ಮೇಲೆ ರಂಗು ಹಚ್ಚಿದ್ದರು. ಅವರ ಈ ಪಟಾಕಿ ಸ್ಟಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ತರಹ ವೈರಲ್ ಆಗುತ್ತಿದ್ದಂತೆಯೇ ಪೊಲೀಸರ ಕಣ್ಣಿಗೆ ಬಿತ್ತು!

ಟೋಲನಾಕಾ–ಬಾಂಡಿಶೆಟ್ಟಾ ರಸ್ತೆಯಲ್ಲಿ ಬೈಕ್ ಓಡಿಸುತ್ತಲೇ ಪಟಾಕಿ ಹಚ್ಚಿ ಗಗನಕ್ಕೆ ರಾಕೇಟ್ ಹಾರಿಸುತ್ತಿದ್ದ ವೀಡಿಯೊ ನೋಡಿ ಜನ ಬೆಚ್ಚಿಬಿದ್ದರು. ವೇಗದಲ್ಲಿ ಬೈಕ್ ಚಲಿಸುತ್ತಿದ್ದ ಆದಿತ್ಯ, ಹಿಂಬದಿ ಸವಾರ ವಿದೀಶ ಪಟಾಕಿ ಹಚ್ಚಿ ಕೇಕೆ ಹಾಕುತ್ತಾ ಹೋಗಿದ್ದರು!

ಈ ವೀಡಿಯೊ ಅ.22ರಂದು ಸಂಚಾರಿ ಠಾಣೆ ಪಿಎಸ್‌ಐ ಶ್ರೀಕಾಂತ ರಾತೋಡ್ ಅವರ ಮೊಬೈಲ್‌ಗೂ ತಲುಪುತ್ತಿದ್ದಂತೆಯೇ ಇಬ್ಬರನ್ನು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಲಾಗಿದೆ.

ಪೊಲೀಸರ ಮಾತಿನಲ್ಲಿ — “ಮೋಜು ಮಿತಿ ದಾಟಿದರೆ ಅದು ಅಪಾಯಕ್ಕೆ ಆಹ್ವಾನ. ರಸ್ತೆ ಸ್ಟಂಟ್ ಅಥವಾ ಪಟಾಕಿ ಸಿಡಿಸುವ ಹವ್ಯಾಸ ಜೀವ ಮತ್ತು ಕಾನೂನು ಎರಡನ್ನೂ ಅಪಾಯಕ್ಕೆ ತಳ್ಳುತ್ತದೆ!” ದೀಪಾವಳಿ ಪಟಾಕಿ ಸಂಭ್ರಮ – ರಸ್ತೆ ಸ್ಟಂಟ್‌ಗಾಗಿ ಅಲ್ಲ, ಸುರಕ್ಷತೆಯ ಸಂಭ್ರಮಕ್ಕಾಗಿ ಮಾತ್ರ!

 

Please Share: