ಕರಾವಳಿ ವಾಯ್ಸ್ ನ್ಯೂಸ್
ಹಾಸನ: ರಾಜ್ಯದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ! ದೀಪಾವಳಿ ಹಬ್ಬದ ಮುನ್ನವೇ ಬಾಕಿ ಉಳಿದ ಆಗಸ್ಟ್ ತಿಂಗಳ ಕಂತು ಹಣವನ್ನು ಮುಂದಿನ 2–3 ದಿನಗಳಲ್ಲಿ ಖಾತೆಗೆ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಂದಿದ್ದ ವೇಳೆ ಸಾರ್ವಜನಿಕರು “ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲ” ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ — “ಜುಲೈ ತಿಂಗಳವರೆಗೆ ಹಣ ಕ್ಲಿಯರ್ ಆಗಿದೆ. ಆಗಸ್ಟ್ ತಿಂಗಳ ಕಂತು ಈಗ ಬಿಡುಗಡೆಗೊಂಡಿದ್ದು, 2–3 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ” ಎಂದು ತಿಳಿಸಿದರು.
ಈವರೆಗೂ ಫಲಾನುಭವಿಗಳಿಗೆ 23 ತಿಂಗಳ ಕಂತುಗಳು, ಅಂದರೆ ಜುಲೈ ತಿಂಗಳವರೆಗಿನ ಪಾವತಿ, ಸಂದಾಯವಾಗಿದೆ. ಆಗಸ್ಟ್ ಕಂತು ಕೂಡ ಸೇರಿಕೊಂಡರೆ 24 ತಿಂಗಳ, ಅಂದರೆ ಎರಡು ವರ್ಷಗಳ ಹಣ ಪಾವತಿಯಾಗಲಿದೆ. ಒಬ್ಬ ಫಲಾನುಭವಿಗೆ ಈವರೆಗೆ ಸುಮಾರು ₹46,000 ರೂ. ಹಣ ದೊರೆತಿದೆ.
ದೀಪಾವಳಿಯ ಮೊದಲು ಹಣ ಖಾತೆಗೆ ಸೇರುವುದರಿಂದ ರಾಜ್ಯದ ಲಕ್ಷಾಂತರ ಮಹಿಳೆಯರು ಸಂತೋಷದಲ್ಲಿದ್ದಾರೆ.


