ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ತಾಲೂಕಿನ ರಾಜ್ಯ ಹೆದ್ದಾರಿಯ ಮೊಗಟಾ ಬಳಿ ಜಿಂಕೆಯನ್ನು ತಪ್ಪಿಸಲು ಯತ್ನಿಸಿದ ವೇಳೆ ದ್ವಿಚಕ್ರ ವಾಹನ ಸವಾರ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ವಿಜಯ ಕರ್ನಾಟಕ ಪತ್ರಿಕೆಯ ಉತ್ತರ ಕನ್ನಡ ಜಿಲ್ಲೆಯ ಪ್ರಸರಣ ವಿಭಾಗದ ಮುಖ್ಯಸ್ಥ ಬಸಯ್ಯ ಹಿರೇಮಠ ಅವರು ಪತ್ರಿಕಾ ಕಾರ್ಯ ನಿಮಿತ್ತ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಅಚಾನಕ್ ಜಿಂಕೆ ಜಿಗಿದು ವಾಹನಕ್ಕೆ ಅಡ್ಡ ಬಂದಿದ್ದು, ಪ್ರಾಣಿಯನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ ನಿಯಂತ್ರಣ ತಪ್ಪಿ ಅವರು ರಸ್ತೆ ಮೇಲೆ ಬಿದ್ದಿದ್ದಾರೆ.

ಅಪಘಾತದ ತಕ್ಷಣ ಸ್ಥಳೀಯರು 108 ತುರ್ತು ವಾಹನಕ್ಕೆ ಕರೆ ಮಾಡಿ ಬಸಯ್ಯ ಹಿರೇಮಠ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಅವರು ಹೆಲ್ಮೆಟ್ ಧರಿಸಿದ್ದರೂ, ಜಿಂಕೆ ಜಿಗಿದ ರಭಸಕ್ಕೆ ಹೆಲ್ಮೆಟ್ ಕಳಚಿ ಹೋಗಿದ್ದು, ತಲೆಯ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ.

ಅಪಘಾತ ಸ್ಥಳದಲ್ಲಿದ್ದವರು ದ್ವಿಚಕ್ರ ವಾಹನದ ನಂಬರ್ ಪ್ಲೇಟ್‌ನಲ್ಲಿ ‘ವಿಜಯ ಕರ್ನಾಟಕ’ ಎಂದು ಬರೆದಿರುವುದನ್ನು ಗಮನಿಸಿ ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬಸಯ್ಯ ಹಿರೇಮಠ ಅವರ ಮೊಬೈಲ್‌ಗೆ ಬಂದ ಕರೆ ಮೂಲಕ ವಿಷಯ ತಿಳಿದು, ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಲಾಗಿದೆ.

ತಲೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ.

 

 

Please Share: