ಹೊಸದಿಲ್ಲಿ: ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದು, ಪಟಾಕಿ ಪ್ರಿಯರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ದಿಲ್ಲಿ-ಎನ್‌ಸಿಆರ್ ಪ್ರದೇಶಕ್ಕಷ್ಟೇ ಸೀಮಿತವಾಗಿರುವ ಪಟಾಕಿ ನಿಷೇಧವನ್ನು ದೇಶಾದ್ಯಂತ ವಿಸ್ತರಿಸುವ ಬಗ್ಗೆ ಕೋರ್ಟ್ ಗಂಭೀರವಾಗಿ ಚಿಂತನೆ ವ್ಯಕ್ತಪಡಿಸಿದೆ.

ಸಿಜೆಐ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದಚಂದ್ರನ್ ಅವರ ಪೀಠ ಶುಕ್ರವಾರ ವಿಚಾರಣೆ ನಡೆಸಿ, “ಶುದ್ಧಗಾಳಿ ಎಂಬುದು ಕೇವಲ ಗಣ್ಯರ ಹಕ್ಕಲ್ಲ, ಅದು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ದಿಲ್ಲಿಗೆ ಮಾತ್ರ ನಿಷೇಧ ಹೇಗೆ? ಇಡೀ ಭಾರತದಲ್ಲಿ ಅನ್ವಯವಾಗಬೇಕು” ಎಂದು ಪ್ರಶ್ನೆ ಎತ್ತಿತು.

ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿಗೆ, ಗಾಳಿಯ ಗುಣಮಟ್ಟ ನಿರ್ವಹಣಾ ಆಯೋಗದಿಂದ ಹವಾಮಾನ ವರದಿ ತರಲು ಪೀಠ ಸೂಚನೆ ನೀಡಿತು.

ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಹಸಿರು ಪಟಾಕಿಗಳ ಕುರಿತು ಸಂಶೋಧನೆ ನಡೆಸಿರುವುದಾಗಿ ಕಾನೂನು ಅಧಿಕಾರಿಗಳು ಮಾಹಿತಿ ನೀಡಿದರು. ಪಟಾಕಿ ತಯಾರಿಕೆಯಲ್ಲಿ ಬಳಸಬೇಕಾದ ನಿರ್ದಿಷ್ಟ ರಾಸಾಯನಿಕಗಳ ಬಗ್ಗೆ ನೀರಿ ಸ್ಪಷ್ಟನೆ ನೀಡಲಿದ್ದು, ಅದನ್ನು ಕೈಗಾರಿಕೆಗಳು ಪಾಲಿಸಬೇಕು ಎಂದು ಪೀಠ ತಿಳಿಸಿತು.

Please Share: