ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆ, ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, “ನಮ್ಮ ನಿರೀಕ್ಷೆಯಂತೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿಲ್ಲ. ಶಿಕ್ಷಕರು ಇನ್ನೂ ಕೆಲವು ದಿನಗಳು ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮುಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ನಾಳೆ (ಅ. 8)ರಿಂದ ಅ. 18ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಅರ್ಧವಾರ್ಷಿಕ ಪರೀಕ್ಷಾ ತಯಾರಿಯಲ್ಲಿ ನಿರತರಾಗಿರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ.
ರಾಜ್ಯಾದ್ಯಂತ ಸುಮಾರು 1 ಲಕ್ಷ 20 ಸಾವಿರ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಸಮೀಕ್ಷೆ 12 ದಿನಗಳೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದಾರೆ.


