ಕಾರವಾರ: “ಆಡಳಿತ ನಡೆಸುವುದಕ್ಕೆ ಗೊಂದಲ ಸೃಷ್ಠಿ ಮಾಡುವುದರಲ್ಲಿ ಪರಿಣಿತಿ ಪಡೆದರೆ ಸಾಕಾಗುವುದಿಲ್ಲ, ಜನರ ವಿಶ್ವಾಸ ಕಳೆದುಕೊಂಡರೆ ಅದು ಅಪಾಯಕಾರಿ” ಎಂದು ಸಂಸದ ವಿಶ್ವೇಶರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಘಟನೆಗಳಿಂದ ರಸ್ತೆಗಳು ಮಣ್ಣಿನಿಂದ ಮುಚ್ಚಿಕೊಂಡಿದ್ದು, ಗುಡ್ಡ ಕುಸಿದು ಕೃಷಿಭೂಮಿಗಳು ಹಾಳಾಗಿದ್ದರೂ ಸರಕಾರ ಮಾತ್ರ ಯೋಜನೆ, ಕಾನೂನು ಎನ್ನುವುದರಲ್ಲಿ ತಲ್ಲೀನವಾಗಿದೆ. ಇದರ ಪರಿಣಾಮವಾಗಿ ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ, ಇದು ಅಪಾಯಕಾರಿ ಸಂಕೇತವಾಗಿದೆ ಎಂದು ಅವರು ಎಚ್ಚರಿಸಿದರು.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಗೇರಿ, ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಜಾರಿಗೆ ಬಂದು ಸಾಕಷ್ಟು ಜನರು ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದರೂ ತಕ್ಕ ಪರಿಹಾರ ಸಿಗದೆ ಹತಾಶರಾಗಿದ್ದಾರೆ ಎಂದು ಉಲ್ಲೇಖಿಸಿದರು. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಭಾರಿಯಾದ ಯೋಜನೆ ಜಾರಿಗೆ ತರುವುದಕ್ಕಿಂತ ಮೊದಲು ರಾಜ್ಯ ಸರಕಾರ ವೈಜ್ಞಾನಿಕ ಅಧ್ಯಯನ ನಡೆಸಬೇಕಿದ್ದು, ಇದನ್ನು ಕೇಂದ್ರ ಸರಕಾರದ ಯೋಜನೆ ಎಂದು ಹೇಳುವುದು ಬೇಜವಾಬ್ದಾರಿ ಎಂದು ತೀವ್ರ ಟೀಕೆ ಮಾಡಿದರು.


