ಕರಾವಳಿ ವಾಯ್ಸ್ ನ್ಯೂಸ್

ಭಟ್ಕಳ: ಭಟ್ಕಳ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಪುರವರ್ಗದ ನಿವಾಸಿಗಳಾದ ಮಹ್ಮದ್ ರೆಹೀನ್ (28) ಮತ್ತು ಮಹ್ಮದ್ ಫೈಜಾನ್ (25) ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಶಂಕಿತರು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಚೆನ್ನಪಟ್ಟಣದ ಶ್ರೀ ಹನುಮಂತ ದೇವಸ್ಥಾನ ಆವರಣದಿಂದ ಬೆಳಿಗ್ಗೆ 3.15ರ ಸುಮಾರಿಗೆ ಆರೋಪಿಗಳು ಮಾರುತಿ ಸುಜುಕಿ ಫ್ರಾನ್‌ಎಕ್ಸ್ (KA-20 MG-3324) ಕಾರಿನಲ್ಲಿ ಗೋವನ್ನು ಕದ್ದೊಯ್ದಿದ್ದರು. ಕಾರಿನೊಳಗೆ ಗೋವನ್ನು ಹಿಂಸಾತ್ಮಕವಾಗಿ ಎಳೆದೊಯ್ಯುತ್ತಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು.

ಕಳ್ಳರು ಮೂಢಭಟ್ಕಳ ಬೈಪಾಸ್ ಮಾರ್ಗವಾಗಿ ಪರಾರಿಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ವಿಡಿಯೋ ಆಧಾರದ ಮೇಲೆ ತನಿಖೆಗೆ ಕೈ ಹಾಕಿ, ಸಕಾಲದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದರು.

ಈ ಹಿಂದೆ ಕೂಡ ಇದೇ ದೇವಸ್ಥಾನದ ಆವರಣದಿಂದ ಗೋ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇಬ್ಬರನ್ನು ಬಂಧಿಸಿರುವುದರಿಂದ ಸ್ಥಳೀಯರು ಪೊಲೀಸರ ವೇಗದ ಕಾರ್ಯಾಚರಣೆಗೆ ಪ್ರಶಂಸಿಸಿದ್ದಾರೆ.

ಪೊಲೀಸರು ಉಳಿದ ಆರೋಪಿಗಳ ಪತ್ತೆ ಹಾಗೂ ಕಳ್ಳತನಕ್ಕೆ ಕಾರಣಗಳ ಕುರಿತು ಮುಂದಿನ ತನಿಖೆ ಮುಂದುವರಿಸಿದ್ದಾರೆ. ನಾಗರಿಕರು ಗೋ ಸಾಗಾಟ ಮತ್ತು ಕಳ್ಳತನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

 

Please Share: