ಕಾರವಾರ: ನಗರದ ದಿವೇಕರ ಕಾಲೇಜಿನ ಹಿಂಬದಿಯ ಕಡಲತೀರದಲ್ಲಿ ಹೋವರ್‌ಕ್ರಾಫ್ಟ್ ನಿಲ್ದಾಣ ನಿರ್ಮಾಣದ ಯೋಜನೆಗೆ ಮಂಗಳವಾರ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಯಿತು.
ತಟರಕ್ಷಕ ಪಡೆಯ ಅಧಿಕಾರಿಗಳು ಜೆಸಿಬಿಯೊಂದಿಗೆ ಸ್ಥಳ ವೀಕ್ಷಣೆಗೆ ಆಗಮಿಸಿದಾಗ, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಸ್ಥಳದಲ್ಲೇ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ನಿರ್ದೇಶನದ ಮೇರೆಗೆ ತಹಸೀಲ್ದಾರ ನಿಶ್ಚಲ ನರೋನಾ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ತಹಸೀಲ್ದಾರರು ಮಾತನಾಡಿ, “ಈ ಹಿಂದೆ ಜಾಗ ಮಂಜೂರಾತಿ ವಿಷಯದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದರು. ಪರ್ಯಾಯ ಜಾಗ ಕುರಿತು ಚರ್ಚೆಯೂ ನಡೆದಿತ್ತು. ಅಂತಿಮ ನಿರ್ಧಾರ ಕೈಗೊಳ್ಳದ ಪರಿಸ್ಥಿತಿಯಲ್ಲಿ ಹೀಗೆ ಸ್ಥಳ ವೀಕ್ಷಣೆಗೆ ಬಂದು ಗೊಂದಲ ಸೃಷ್ಟಿಸಬಾರದು. ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಿದ ಬಳಿಕವೇ ಮುಂದಿನ ನಿರ್ಧಾರವಾಗಲಿದೆ” ಎಂದು ಸ್ಪಷ್ಟಪಡಿಸಿದರು.
ವಿರೋಧ ಹೆಚ್ಚಿದ ಕಾರಣ ತಟರಕ್ಷಕ ಪಡೆಯ ಹಿರಿಯ ಅಧಿಕಾರಿಗಳು ಹಿಂತಿರುಗಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಗಿರೀಶ, ಪಿಎಸ್ಸೈ ಉದ್ದಪ್ಪ, ಜನಶಕ್ತಿ ವೇದಿಕೆಯ ಮಾಧವ ನಾಯ್ಕ, ಬಾಬು ಶೇಕ್, ರಾಜನ್ ಬಾನಾವಳಿ, ರೋಹಿದಾಸ್ ಬಾನಾವಳಿ, ದಿನೇಶ್ ಬಾನಾವಳಿ ಹಾಗೂ ಅನೇಕ ಮೀನುಗಾರರು ಉಪಸ್ಥಿತರಿದ್ದರು.


