ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರಾವಳಿ ಉತ್ಸವದ ಸಂಭ್ರಮಕ್ಕೆ ಸಮುದ್ರದ ಅಲೆಗಳೇ ಸಾಕ್ಷಿಯಾಗುವಂತೆ ರವಿವಾರ ಜಿಲ್ಲಾಡಳಿತದ ವತಿಯಿಂದ ಅಲಿಗದ್ದಾ ಕಡಲತೀರದಲ್ಲಿ ರೋಚಕ ದೋಣಿ ಸ್ಪರ್ಧೆ ನಡೆಯಿತು. ಪರಂಪರೆಯ ಸಾಹಸ, ಶಿಸ್ತು ಮತ್ತು ತಂಡಭಾವನೆಯ ಸಂಗಮವಾಗಿ ಈ ಸ್ಪರ್ಧೆ ಕರಾವಳಿ ಸಂಸ್ಕೃತಿಗೆ ವಿಶೇಷ ಕಳೆ ನೀಡಿತು.
ಅಲಿಗದ್ದಾ ಕಡಲತೀರದಿಂದ ಆರಂಭವಾದ ದೋಣಿ ಸ್ಪರ್ಧೆಗೆ ಜಿಲ್ಲಾ ಪಂಚಾಯಿತಿಯ ಸಿಇಒ ಡಾ. ದಿಲೀಶ ಶಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಅಲಿಗದ್ದಾದಿಂದ ಟ್ಯಾಗೋರ್ ಕಡಲತೀರದವರೆಗೆ ನಡೆದ ಈ ಸ್ಪರ್ಧೆಯಲ್ಲಿ 20 ತಂಡಗಳು ನೋಂದಾಯಿಸಿಕೊಂಡಿದ್ದು, 18 ತಂಡಗಳ 36 ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಠಿಣ ಅಲೆಗಳನ್ನು ಮೀರಿಸಿ ವೇಗ ಹಾಗೂ ಕೌಶಲ್ಯ ಪ್ರದರ್ಶಿಸಿದ ನಾರಾಯಣ ನಾಗರಾಜ ಅಂಬಿಗ ಮತ್ತು ಸರ್ವೇಶ ಅಂಬಿಗ ತಂಡವು ಪ್ರಥಮ ಸ್ಥಾನ ಪಡೆದು ರೂ.10,000 ನಗದು ಬಹುಮಾನ ಗಳಿಸಿತು. ಪಾಂಡುರಂಗ ಜೋಗಿ ಅಂಬಿಗ ಹಾಗೂ ವಿನೋದ ದುರ್ಗೇಕರ ದ್ವಿತೀಯ ಸ್ಥಾನ ಪಡೆದು ರೂ.7,000 ಬಹುಮಾನಕ್ಕೆ ಪಾತ್ರರಾದರೆ, ಕೃಷ್ಣಾನಂದ ಸಾಳಗಾಂವ್ಕರ ಹಾಗೂ ರಘುನಾಥ ಯಶವಂತ ಚೋಪಡೇಕರ ತೃತೀಯ ಸ್ಥಾನ ಪಡೆದು ರೂ.4,000 ನಗದು ಬಹುಮಾನ ಪಡೆದರು.
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರತೀಕ ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು, ಗಣ್ಯರು ಹಾಗೂ ಕರಾವಳಿ ಭಾಗದ ಜನರು ಸ್ಪರ್ಧೆಗೆ ಸಾಕ್ಷಿಯಾಗಿದ್ದು, ದೋಣಿ ಸ್ಪರ್ಧೆ ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೆರೆದಿತು.

