ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಚೆಕ್ ಬೌನ್ಸ್ ಪ್ರಕರಣವೆಂದರೆ ಸಾಮಾನ್ಯವಾಗಿ ಸಾಲಗಾರರ ವಿರುದ್ಧದ ಕಾನೂನು ಕ್ರಮ – ಆದರೆ ಅಂಕೋಲಾದ ಈ ಕೇಸ್‌ನಲ್ಲಿ ಕಥೆ ಸಂಪೂರ್ಣ ತಲೆಕೆಳಗಾಗಿದೆ! ಸುಳ್ಳು ದೂರು ನೀಡಿ ನಿರಪರಾಧಿಯನ್ನು ಕಿರುಕುಳ ನೀಡಿದ ದೂರುದಾರನ ವಿರುದ್ಧವೇ ಈಗ ನ್ಯಾಯಾಲಯ ಕ್ರಮ ಕೈಗೊಳ್ಳಲು ಆದೇಶಿಸಿದೆ.

ಬೆಲೆಕೇರಿಯ ಲಂಬೋದರ ತಿಪ್ಪಣ್ಣ ನಾಯಕರು 2019ರಲ್ಲಿ ನಿತ್ಯಾನಂದ ಗಣಪತಿ ಬಾನಾವಳಿಕರ ವಿರುದ್ಧ ಚೆಕ್ ಬೌನ್ಸ್ ದೂರು ದಾಖಲಿಸಿದ್ದರು. ಆದರೆ ವಿಚಾರಣೆ ವೇಳೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ನೀಡಿದ ಸಾಕ್ಷ್ಯದಿಂದ ಸತ್ಯತೆ ಬಯಲಾಯಿತು – ಆ ಚೆಕ್ ಆರೋಪಿಯದ್ದೇ ಅಲ್ಲ! ಅದು ಮತ್ತೊಬ್ಬ ನಿತ್ಯಾನಂದ ಗಂಗಾಧರ ಬಾನಾವಳಿಕರ ಅವರದ್ದಾಗಿತ್ತು.

ಅಂಕೋಲಾದ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಪ್ರಿಯಾ ರವಿ ಜೋಗಳೇಕರ್ ಅವರು ತೀರ್ಪಿನಲ್ಲಿ, ತಪ್ಪು ವ್ಯಕ್ತಿಯ ವಿರುದ್ಧ ಸುಳ್ಳು ದೂರು ದಾಖಲಿಸುವುದು ಕೇವಲ ಕಾನೂನುಬಾಹಿರವಲ್ಲ, ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಆರೋಪಿಯನ್ನು ಸಂಪೂರ್ಣ ನಿರ್ದೋಷಿ ಎಂದು ಘೋಷಿಸುವುದರೊಂದಿಗೆ, ದೂರುದಾರನ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶ ನೀಡಿದರು.

“ಸುಳ್ಳು ದೂರು ನೀಡುವವರಿಗೆ ಎಚ್ಚರ!”

ವಕೀಲ ವಲಯದ ಅಭಿಪ್ರಾಯದಂತೆ, ಈ ತೀರ್ಪು ಸುಳ್ಳು ದೂರುಗಳ ಮೂಲಕ ಕಾನೂನನ್ನು ದುರುಪಯೋಗ ಮಾಡುವವರಿಗೆ ಗಂಭೀರ ಎಚ್ಚರಿಕೆಯ ಸಂದೇಶ.

ವಕೀಲ ಜಗದೀಶ ಟಿ. ಹಾರವಾಡೇಕರ್ ಅವರು ಆರೋಪಿಯ ಪರವಾಗಿ ಪ್ರಬಲವಾದ ವಾದ ಮಂಡಿಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸತ್ಯವನ್ನು ನ್ಯಾಯಾಲಯದ ಮುಂದೆ ತಂದು ನಿಲ್ಲಿಸಿದರು.

Please Share: