ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲೂಕಿನ ಅಳ್ವೇಕೊಡಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು, ಲಗೇಜ್ ರಿಕ್ಷಾ ಮತ್ತು ಸ್ಕೂಟರ್ ಪರಸ್ಪರ ಡಿಕ್ಕಿಯಾದ ಈ ಘಟನೆ ಸ್ಥಳೀಯರಲ್ಲಿ ಭೀತಿಯ ಸಂಚಲನ ಉಂಟುಮಾಡಿದೆ.
ಗಾಯಾಳುಗಳ ವಿವರ
ಈ ಅಪಘಾತದಲ್ಲಿ ವನ್ನಳ್ಳಿ ನಿವಾಸಿ ಮಹಮ್ಮದ್ ಅಲಿ ಫಕೀರ್ ಟೋಟೊ (54), ಸಹ ಸವಾರ ಅಬ್ದುಲ್ ಹನೀಫ್ ಲಡು (30), ಕಾರಿನಲ್ಲಿದ್ದ ಮುರ್ಡೇಶ್ವರ ನಿವಾಸಿ ವಿನುತಾ ನಾಯಕ (29) ಹಾಗೂ ಅಂಕೋಲಾ ತಾಲ್ಲೂಕಿನ ಮೊಗಟಾ ನಿವಾಸಿ ಸಾತ್ವಿಕ್ ನಾಯಕ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಹಂಪ್ ತೆರವು – ಅಪಘಾತಗಳಿಗೆ ಕಾರಣ?
ಇತ್ತೀಚೆಗೆ ಅಳ್ವೇಕೋಡಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಅಳವಡಿಸಿದ್ದ ಹಂಪ್‌ಗಳನ್ನು ತೆರವುಗೊಳಿಸಿರುವ ಪರಿಣಾಮ ವಾಹನಗಳ ವೇಗ ಅತಿಯಾಗಿ ಹೆಚ್ಚಳಗೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಂಪ್ ತೆರವುಗೊಳಿಸದರಿಂದ ನಿಯಂತ್ರಣ ತಪ್ಪಿದ ವಾಹನಗಳು ಸರಿಯಾಗಿ ಬ್ರೇಕ್ ಹಾಕದೆ ವೇಗದಲ್ಲೇ ಸಾಗುತ್ತಿರುವುದು ಅಪಘಾತಗಳ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ
ಹೆದ್ದಾರಿ ದಾಟುವ ವಿದ್ಯಾರ್ಥಿಗಳು, ಪಾದಚಾರಿಗಳು ಪ್ರತಿದಿನ ಜೀವದ ಹಂಗು ತೊರೆದು ರಸ್ತೆ ದಾಟುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅತಿವೇಗದ ವಾಹನಗಳಿಂದ ರಸ್ತೆ ದಾಟಲು ಹೆದರಿಕೆ ಹೆಚ್ಚಿದ್ದು, ಇದರಿಂದಲೇ ಹಲವು ಸಣ್ಣ–ಪುಟ್ಟ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹಂಪ್ ಮರುಅಳವಡಿಕೆಗೆ ಆಗ್ರಹ
“ಹಂಪ್‌ಗಳ ತೆರವಿನಿಂದ ರಸ್ತೆ ಅಪಘಾತಗಳು ದೈನಂದಿನ ವಿಷಯವಾಗಿವೆ. ಜನರ ಸುರಕ್ಷತೆ ಕಾಪಾಡಲು ತಕ್ಷಣವೇ ಹಂಪ್‌ಗಳನ್ನು ಮರು ಅಳವಡಿಸಬೇಕಾಗಿದೆ” ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸ್ಥಳದಲ್ಲೇ ಅಗತ್ಯ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಕೋರಿದ್ದಾರೆ.
“ಇಲ್ಲಿ ಹಂಪ್ ಇದ್ದಾಗ ವಾಹನಗಳು ನಿಧಾನಗತಿಯಲ್ಲೇ ಸಾಗುತ್ತಿದ್ವು. ಆದರೆ ಈಗ ಹಂಪ್ ತೆಗೆದ ನಂತರ ಟ್ರಕ್, ಬಸ್, ಕಾರು ಏನನ್ನೂ ಲೆಕ್ಕಿಸದೇ ಅತಿವೇಗದಲ್ಲಿ ಬರುತ್ತಿವೆ. ನಮ್ಮ ಮುಂದೆ ಅಪಘಾತ ನಡೆಯಿತ್ತೇ ಎನ್ನುವ ಭಯ ಕಾಡುತ್ತಿದೆ.” ಎಂದೂ ಒಬ್ಬರು, “ಪ್ರತಿದಿನ ಮಕ್ಕಳು ಶಾಲೆಗೆ ಹೆದ್ದಾರಿ ದಾಟುತ್ತಾರೆ. ವಾಹನಗಳ ವೇಗ ಅಷ್ಟು ಹೆಚ್ಚು ಇರುತ್ತದೆ ಎಂದು ನೋಡಿದ್ರೆ ನಾವೇ ಕಂಗಾಲಾಗುತ್ತೇವೆ. ಹಂಪ್ ತೆಗೆದು ಹಾಕಿದ್ದು ದೊಡ್ಡ ತಪ್ಪು. ತಕ್ಷಣವೇ ಮರುಅಳವಡಿಸಬೇಕು.” ಎಂದೂ ಇನ್ನೊಬ್ಬರು ಹೀಗೆ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಪ್ರಸ್ತುತ ಪ್ರಕರಣದ ಬಗ್ಗೆ ಪೊಲೀಸರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ತನಿಖೆ ನಡೆಸುತ್ತಿದ್ದು, ಅಪಘಾತದ ನಿಖರ ಕಾರಣ ತಿಳಿಯಬೇಕಿದೆ.

