ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ತಾಲೂಕಿನ ತತ್ವಣಗಿ ಗ್ರಾಮದ ಕೃಷ್ಣ ಮಾರುತಿ ಹುಲಸ್ವಾರ ಎಂಬಾತನ ವಿರುದ್ಧ ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಕಿರಿಕಿರಿ ಮಾಡಿದ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಆರೋಪದಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಕೃಷ್ಣ ಮಾರುತಿ ಹುಲಸ್ವಾರ ತನ್ನನ್ನು ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ (ಸಿಂಹ ಘರ್ಜನೆ) ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ. ಈತನ ವಿರುದ್ಧ ಈಗಾಗಲೇ ಹಳಿಯಾಳ ಠಾಣೆಯಲ್ಲಿ ವಂಚನೆ, ಸುಲಿಗೆ ಹಾಗೂ ಬ್ಲ್ಯಾಕ್ಮೇಲಿಂಗ್ ಸಂಬಂಧಿತ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದೌರ್ಜನ್ಯಕ್ಕೊಳಗಾದ ಬಾಲಕಿಯ ತಂದೆ ಪರಶುರಾಮ ಮೂಲಿಮನಿ ಅವರು ನೀಡಿದ ದೂರಿನಂತೆ, ಅವರ ಮಗಳು ಹಾಗೂ ಆಕೆಯ ಸ್ನೇಹಿತೆಯರು ಊಟಕ್ಕಾಗಿ ಹಳಿಯಾಳದ ಉದ್ಯಾನವನದ ಕಡೆಗೆ ತೆರಳುತ್ತಿದ್ದ ವೇಳೆ, ಆರೋಪಿತನು ಅವರನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಾ ಕಿರಿಕಿರಿ ನಡೆಸಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಪಕ್ಕದ ಮನೆಯ ನಿವಾಸಿ ಪ್ರವೀಣ ಭಜಂತ್ರಿ ಅವರು ಆರೋಪಿತನಿಗೆ ದೂರವಾಣಿ ಮೂಲಕ ವಿಚಾರಿಸಿದಾಗ, ಆತ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

