ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಸದಾಶಿವಗಡ ಲಿಂಕ್ ರಸ್ತೆ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಕಾರವಾರದಿಂದ ಗೋವಾ ಕಡೆಗೆ ಸಾಗುತ್ತಿದ್ದ MH-05-AS-7338 ಸಂಖ್ಯೆಯ ಕಾರನ್ನು ಮುಂಬೈನ ದೊಂಬಿವಲಿ ನಿವಾಸಿ ಶಿಬು ಶಶಿಧರನ್ (40) ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಸದಾಶಿವಗಡ ಲಿಂಕ್ ರಸ್ತೆಯತ್ತ ತಿರುಗುತ್ತಿದ್ದ KA-25-HB-6356 ಸಂಖ್ಯೆಯ ಹೊಂಡಾ ಆಕ್ಟಿವಾ ಸ್ಕೂಟರ್ಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಜೈಪಾಲ ಶಂಕರ ಸಾಳಸ್ಕರ ಅವರಿಗೆ ಮುಖ ಹಾಗೂ ಕಾಲಿಗೆ ಸಾಮಾನ್ಯ ಗಾಯಗಳಾಗಿವೆ. ಹಿಂಬದಿ ಕುಳಿತಿದ್ದ ದೀಪಕ ಗಂಗಾಧರ ನಾಯ್ಕ ಅವರಿಗೆ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಜೈಪಾಲ ಅವರ ಸಂಬಂಧಿ ಸದಾಶಿವಗಡದ ಮಾಲದಾರವಾಡ ನಿವಾಸಿ ಸಾಯಿಪ್ರಸಾದ ಮಧುಸೂದನ ಸಾಳಸ್ಕರ ನೀಡಿದ ದೂರಿನ ಮೇರೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
