ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಕೋಡಿಭಾಗದಲ್ಲಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ಕೇಂದ್ರವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಡಿಸೆಂಬರ್ 12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ ಎಂದು ಆಡಳಿತಾಧಿಕಾರಿ ಹಾಗೂ ಸಾಗರ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಹರಗಿ ಮಾಹಿತಿ ನೀಡಿದರು.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಾಗತಿಕ ಪರಿಸರ ಕಳವಳ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾಗರ ಜೀವಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳು ಜಂಟಿಯಾಗಿ “ಹಸಿರು ವ್ಯವಹಾರ ಮತ್ತು ನೀಲಿ ಕ್ರಾಂತಿ: ಪರಿಸರ ಸುಸ್ಥಿರತೆಗೆ ಮಾರ್ಗಗಳು” ಎಂಬ ವಿಷಯವಸ್ತುವಿನಡಿ ಸಮ್ಮೇಳನವನ್ನು ಆಯೋಜಿಸುತ್ತಿವೆ ಎಂದು ಹೇಳಿದರು. ಪಿಎಂ–ಉಷಾ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಪ್ರಾಯೋಜಿತವಾಗಿರುವ ಈ ಸಮ್ಮೇಳನದಲ್ಲಿ ಕರಾವಳಿ ಆರ್ಥಿಕತೆ, ಹಸಿರು ಉದ್ಯಮ, ಸಮುದ್ರ ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಸುಸ್ಥಿರತೆಯ ವಿಷಯಗಳ ಕುರಿತು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ತಜ್ಞರು ಚರ್ಚೆ ನಡೆಸಲಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ವಿನೋದಕುಮಾರ್ ನೆರವೇರಿಸಲಿದ್ದು, ಕಾರ್ಯಕ್ರಮಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ, ಕವಿವಿ ಕುಲಸಚಿವ ಡಾ. ಶಂಕರ ವಣಿಕ್ಯಾಳ, ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಕವಿವಿ ವಿಜ್ಞಾನ ವಿಭಾಗದ ಡೀನ್ ಡಾ. ಎ.ಎ ಮೂಲಿಮಣಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ. ಎ.ಎಸ್. ಶಿರಾಳಶೆಟ್ಟಿ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹನುಮಂತ ಎನ್. ಮುಸ್ತಾರಿ ಹಾಗೂ ದಿವೇಕರ ಕಾಲೇಜಿನ ಗ್ರಂಥಪಾಲಕ ಸುರೇಶ್ ಉಪಸ್ಥಿತರಿದ್ದರು.
ಸಮ್ಮೇಳನ ಯಶಸ್ವಿಯಾಗಿ ನಡೆಯಲು ಗ್ರಾಸಿಮ್ ಇಂಡಸ್ಟ್ರೀಸ್ ಕಾರವಾರ ಘಟಕ, ಮರ್ಕ್ಯೂರಿ ಶಿಪ್ ರಿಪೇರ್ ಸಂಸ್ಥೆಯ ಪಿ.ವಿ. ಪ್ರಜಿತ್, ಸೆಂಟ್ ಮಿಲಾಗ್ರೀಸ್ ಸಂಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್, ಕಾರವಾರ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಆರ್ಥಿಕ ಸಹಾಯ ನೀಡಿದ್ದು, ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಶಿವಕುಮಾರ್ ಹರಗಿ ಹೇಳಿದರು.

