ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಭಟ್ಕಳ ತಹಶಿಲ್ದಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದ ಬೆನ್ನಲ್ಲೇ, ಅದೇ ದಿನ ಕಾರವಾರ ತಹಶಿಲ್ದಾರ್ ಕಚೇರಿಗೂ ಇದೇ ಮಾದರಿಯ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರಿ ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಪದೆಪದೆ ಬರುತ್ತಿರುವ ಈ ಹುಸಿ ಬೆದರಿಕೆಗಳು ಸಾರ್ವಜನಿಕರು ಹಾಗೂ ಅಧಿಕಾರಿಗಳಲ್ಲಿ ಭಯ ಹುಟ್ಟಿಸುತ್ತಿವೆ.
ಕಾರವಾರ ತಹಶಿಲ್ದಾರ್ ಕಚೇರಿಗೆ ಬಂದ ಇಮೇಲ್‌ನಲ್ಲಿ ಕಚೇರಿ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಮಾಹಿತಿ ದೊರಕುತ್ತಿದ್ದಂತೆಯೇ ತಹಶಿಲ್ದಾರ್ ಕಚೇರಿ ಸಿಬ್ಬಂದಿ ತಕ್ಷಣ ಕಾರವಾರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಅಗ್ನಿಶಾಮಕ ದಳ ಹಾಗೂ ಶ್ವಾನ ದಳದ ಸಹಾಯದಿಂದ ಕಚೇರಿ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದಿದ್ದರೆ ಇದು ಹುಸಿ ಬೆದರಿಕೆ ಎನ್ನುವುದು ದೃಢಪಡಲಿದೆ.
ಭಟ್ಕಳ ಮತ್ತು ಕಾರವಾರ ತಹಶಿಲ್ದಾರ್ ಕಚೇರಿಗಳಿಗೆ ಬಂದ ಇಮೇಲ್‌ಗಳು ಒಂದೇ ಮಾದರಿಯಲ್ಲಿದ್ದು, ಭಾಷೆ ಹಾಗೂ ಶೈಲಿಯೂ ಬಹುತೇಕ ಒಂದೇ ರೀತಿಯಲ್ಲಿರುವುದು ಗಮನಾರ್ಹ. ಇದರಿಂದ ಒಂದೇ ವ್ಯಕ್ತಿ ಅಥವಾ ಒಂದೇ ಮೂಲದಿಂದ ಈ ಇಮೇಲ್‌ಗಳು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರಿಂದ ಈ ರೀತಿಯ ಇಮೇಲ್ ಆಗಿರಬಹುದೆಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ನಿರ್ಲಕ್ಷ್ಯ ವಹಿಸದೇ ತಾಂತ್ರಿಕವಾಗಿ ಇಮೇಲ್ ಮೂಲ ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಿಗೆ ಪದೆಪದೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ರೀತಿಯ ಹುಸಿ ಬೆದರಿಕೆಗಳಿಂದ ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿ ಉಂಟಾಗುವುದರ ಜೊತೆಗೆ, ಸಾರ್ವಜನಿಕರಲ್ಲಿ ಅನಗತ್ಯ ಭಯ ಹಾಗೂ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಬರ್ ತಜ್ಞರ ನೆರವಿನಿಂದ ಇಮೇಲ್ ಕಳುಹಿಸಿದವರ ಐಪಿ ವಿಳಾಸ, ಸ್ಥಳ ಮತ್ತು ಹಿನ್ನೆಲೆ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಹುಸಿ ಬೆದರಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಯಾವುದೇ ರೀತಿಯ ಅನುಮಾನಾಸ್ಪದ ಸಂದೇಶಗಳು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

