ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಶಾಂತಿ–ಭಕ್ತಿಯ ಕೇಂದ್ರವಾಗಬೇಕಿದ್ದ ದೇವಾಲಯವೇ ರಕ್ತಪಾತದ ವೇದಿಕೆಯಾಗಿದ್ದು, ಕುಟುಂಬದೊಳಗಿನ ಪೂಜಾ ಹಕ್ಕಿನ ವಿವಾದ ಕೊಲೆ ಯತ್ನದ ಹಂತಕ್ಕೆ ತಲುಪಿದ ಭೀಕರ ಘಟನೆ ತಾಲ್ಲೂಕಿನ ಜಗಲಬೇಟ ಗ್ರಾಮ ಪಂಚಾಯತಿ ವ್ಯಾಪ್ತಿಯ ವೈಣಿ ಠಾಕೋರವಾಡದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕು ಯಾರಿಗೆ ಎಂಬ ವಿಚಾರ ಹಲವು ದಿನಗಳಿಂದ ಮಿರಾಶಿ ಕುಟುಂಬದೊಳಗೆ ಮೌನವಾಗಿ ಕುದಿಯುತ್ತಿತ್ತು. ಆ ಮೌನವೇ ಸೋಮವಾರ ಬೆಳಿಗ್ಗೆ ಕತ್ತಿಯ ಹೊಡೆತವಾಗಿ ಸಿಡಿದಿದೆ.
ದೇವಾಲಯದ ಅರ್ಚಕರಾಗಿದ್ದ ಈಶ್ವರ ರಾಮ ಮಿರಾಶಿ ಇತ್ತೀಚೆಗೆ ನಿಧನರಾದ ಬಳಿಕ, ಸಂಪ್ರದಾಯದಂತೆ ಅವರ ಸಹೋದರ ಪಾಂಡುರಂಗ ರಾಮ ಮಿರಾಶಿಗೆ ಪೂಜೆಯ ಜವಾಬ್ದಾರಿ ನೀಡಬೇಕೆಂಬ ಮಾತು ಕುಟುಂಬದಲ್ಲಿ ಕೇಳಿಬಂದಿತ್ತು. ಆದರೆ, ಮೃತ ಅರ್ಚಕರ ಪುತ್ರ ಪ್ರಕಾಶ ಈಶ್ವರ ಮಿರಾಶಿ ಇದನ್ನು ಒಪ್ಪದೆ, ದೇವಾಲಯದ ಕೀಲಿಯನ್ನು ತನ್ನ ಬಳಿಯೇ ಇಟ್ಟುಕೊಂಡು ಚಿಕ್ಕಪ್ಪ ಪೂಜೆ ಮಾಡುವುದನ್ನು ತಡೆಯುತ್ತಿದ್ದನು. ಇದರಿಂದ ಇಬ್ಬರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆದಿದ್ದವು.
ಸೋಮವಾರ ಬೆಳಿಗ್ಗೆ, ಪ್ರಕಾಶ ಮಿರಾಶಿ ಎಂದಿನಂತೆ ದೇವಾಲಯದಲ್ಲಿ ಪೂಜೆ ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ್ದನು. ಬೆಳಿಗ್ಗೆ ಸುಮಾರು 9.30ರ ಸಮಯದಲ್ಲಿ, ಪಾಂಡುರಂಗ ಮಿರಾಶಿ ಪೂಜೆಗಾಗಿ ದೇವಾಲಯದ ಕೀಲಿಯನ್ನು ಕೇಳಲು ಪ್ರಕಾಶನ ಮನೆಗೆ ಬಂದಿದ್ದಾನೆ. ಆದರೆ ಈ ಬಾರಿ ಮಾತಿನ ಚಕಮಕಿ ಗಡಿ ಮೀರಿದೆ.
“ದೇವಾಲಯದ ವಿಚಾರದಲ್ಲಿ ಮತ್ತೆ ಹಸ್ತಕ್ಷೇಪ ಮಾಡಿದರೆ ಜೀವಂತವಾಗಿ ಬಿಡುವುದಿಲ್ಲ” ಎಂದು ಬೆದರಿಸಿದ ಪ್ರಕಾಶ ಮಿರಾಶಿ, ಕ್ಷಣಾರ್ಧದಲ್ಲಿ ಕತ್ತಿ ಹಿಡಿದು ಚಿಕ್ಕಪ್ಪನ ತಲೆಗೆ ಹೊಡೆದಿದ್ದಾನೆ. ತಲೆಯ ಬಲಭಾಗಕ್ಕೆ ಬಿದ್ದ ಭಾರೀ ಹೊಡೆತದಿಂದ ಪಾಂಡುರಂಗ ಮಿರಾಶಿ ನೆಲಕ್ಕುರುಳಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ.
ಘಟನೆಯ ನಂತರ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುವನ್ನು ತಕ್ಷಣ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ಗಾಯಗೊಂಡ ಪಾಂಡುರಂಗ ಮಿರಾಶಿ ಅವರ ಪತ್ನಿ ಪ್ರಿಯಾಂಕಾ ಮಿರಾಶಿ ನೀಡಿದ ದೂರಿನ ಆಧಾರದಲ್ಲಿ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಮುಖ ಆರೋಪಿ ಪ್ರಕಾಶ ಮಿರಾಶಿಯನ್ನು ಬಂಧಿಸಿದ್ದಾರೆ. ಆರೋಪಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ನಂತರ ನ್ಯಾಯಾಂಗ ಬಂಧನಕ್ಕಾಗಿ ಹಳಿಯಾಳ ಜೈಲಿಗೆ ಕಳುಹಿಸಲಾಗಿದೆ.
ಪೂಜೆಯ ಹಕ್ಕಿನ ವಿವಾದದಿಂದಾಗಿ ಕೊಲೆ ಮಾಡುವ ಉದ್ದೇಶದಿಂದಲೇ ದಾಳಿ ನಡೆಸಲಾಗಿದೆ ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದು, ಗಾಯಾಳುವಿನ ಹೇಳಿಕೆ ದಾಖಲಾಗಬೇಕಿದೆ. ದೇವಾಲಯದ ಕೀಲಿಯಿಂದ ಆರಂಭವಾದ ವೈಮನಸ್ಸು ಕೊನೆಗೆ ರಕ್ತಪಾತದಲ್ಲಿ ಅಂತ್ಯ ಕಂಡಿದ್ದು, ಈ ಘಟನೆ ಗ್ರಾಮದಲ್ಲಿ ಭಕ್ತಿಯ ಜೊತೆಗೆ ಭಯವನ್ನೂ ಬಿತ್ತಿದೆ.
