ಯಲ್ಲಾಪುರ: ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ಕ್ಷಣದಲ್ಲಿ ದುಃಖದ ಕಣ್ಣೀರಾಗಿರುವ ದಾರುಣ ಘಟನೆ ಮಂಗಳವಾರ ತಾಲೂಕಿನ ಕೆಳಾಸೆ ಸಮೀಪ ನಡೆದಿದೆ. ಯಲ್ಲಾಪುರದ ಸಬಗೇರಿ ಮೂಲದ ಸಾಗರ್ ದೇವಾಡಿಗ (23) ಎಂಬ ಯುವಕ ಈಜಲು ಹೋಗಿ ನೀರುಪಾಲಾಗಿದ್ದಾನೆ.
ಮಧ್ಯಾಹ್ನದ ವೇಳೆಗೆ ಸಾಗರ್ ಹಾಗೂ ಅವನ ಮೂರ್ನಾಲ್ಕು ಗೆಳೆಯರು ಹುಟ್ಟುಹಬ್ಬದ ಪಾರ್ಟಿ ಮಾಡಲು ಬೇಡ್ತಿ ಹಳ್ಳದ ಸಮೀಪದ ಕೆಳಾಸೆ ಹೊಳೆಗೆ ತೆರಳಿದ್ದರು. ಸಂಭ್ರಮದ ಮಧ್ಯೆ ಸಾಗರ್ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದು, ತಕ್ಷಣವೇ ಹೊಳೆಯ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾನೆ.
ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ದೊರೆತ ತಕ್ಷಣ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ನದಿಯಲ್ಲಿ ಶೋಧ ಕಾರ್ಯ ನಡೆದಿದ್ದರೂ ಸಾಗರ್‌ನ ಶವ ಪತ್ತೆಯಾಗಿಲ್ಲ.
ಈ ಘಟನೆ ಸಾಗರ್‌ನ ಕುಟುಂಬ ಹಾಗೂ ಗೆಳೆಯರ ವಲಯದಲ್ಲಿ ಆಘಾತ ಮತ್ತು ಶೋಕದ ವಾತಾವರಣವನ್ನು ಉಂಟುಮಾಡಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಸ್ನೇಹಿತರಿಗೆ ಈ ದುರಂತ ನಂಬಲಾರದಂತಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


