ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಮುಟ್ಟಳ್ಳಿ ಬೈಪಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕುಂದಾಪುರದಿಂದ ಭಟ್ಕಳದತ್ತ ಅತಿವೇಗದಲ್ಲಿ ಬರುತ್ತಿದ್ದ ಬಸ್‌ ಚಾಲಕ ಅಜಾಗರೂಕತೆಯಿಂದ ಎದುರುಗಡೆಯಾಗಿ ನಿಧಾನವಾಗಿ ಸಾಗುತ್ತಿದ್ದ ಹೋಂಡಾ ಡಿಯೋ ಸ್ಕೂಟಿಗೆ ಓವರ್‌ಟೇಕ್ ಮಾಡುವ ಯತ್ನದಲ್ಲಿ ಎಡಭಾಗದಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಸ್ಕೂಟಿ ಸವಾರ ಹೆದ್ದಾರಿಯಲ್ಲಿ ಬಿದ್ದುಹೋಗಿದ್ದು, ಆ ವೇಳೆ ಬಸ್‌ನ ಹಿಂಬದಿ ಚಕ್ರ ನೇರವಾಗಿ ತಲೆಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತದಲ್ಲಿ ಮೃತಪಟ್ಟವರನ್ನು ಸುಂದರ ಲಕ್ಷ್ಮಣ ಆಚಾರಿ (64), ಪುರವರ್ಗ ಗಣೇಶನಗರ ನಿವಾಸಿ ಎಂದು ಗುರುತಿಸಲಾಗಿದೆ. ಅವರು ಹೆಲ್ಮೆಟ್ ಧರಿಸಿದ್ದರೂ ಬಸ್‌ನ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ತಕ್ಷಣದ ಮರಣ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಮೃತರ ಅಳಿಯ ಗುರುರಾಜ ಅವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ವಹಿಸಲಾಗಿದೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಿಪಿಐ ದಿವಾಕರ್ ಪಿ.ಎಂ. ಹಾಗೂ ಪಿಎಸ್‌ಐ ನವೀನ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

Please Share: