ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ತಾಲೂಕಿನಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಗೋಹತ್ಯೆ ಜಾಲದ ವಿರುದ್ಧ ಭಟ್ಕಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 23 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ನಡೆಸಿದ ದಾಳಿಯಲ್ಲಿ ವಧೆಯ ಉದ್ದೇಶದಿಂದ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕೃತ್ಯ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಮೊದಲ ಪ್ರಕರಣದಲ್ಲಿ ಶಿರಾಲಿಯಿಂದ ಭಟ್ಕಳದತ್ತ ಟಾಟಾ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣ ದಾಳಿ ನಡೆಸಿದರು. ಲಾರಿಯಲ್ಲಿ ಸುಮಾರು ₹14 ಲಕ್ಷ ಮೌಲ್ಯದ 14 ಜಾನುವಾರುಗಳನ್ನು ಯಾವುದೇ ಪರವಾನಗಿ ಇಲ್ಲದೆ, ನೀರು ಹಾಗೂ ಆಹಾರ ನೀಡದೆ ಅಮಾನುಷವಾಗಿ ಕಟ್ಟಿ ಸಾಗಿಸಲಾಗುತ್ತಿತ್ತು.
ಈ ವೇಳೆ ಹಾವೇರಿ ಮೂಲದ ಹಜರತ್ ಅಲಿ ತಹಶಿಲ್ದಾರ ಪರಾರಿಯಾಗಿದ್ದು, ಚಾಲಕ ಧಾರವಾಡದ ಕಲಘಟಗಿ ನಿವಾಸಿ ಮೊಹಮ್ಮದ್ ಆಸೀಪ್ (32) ಅವರನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸಿಪಿಐ ಮಲ್ಲಿಕಾರ್ಜುನಯ್ಯ ಕೊರಾಣಿ ದೂರು ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ವೆಂಕಟೇಶ ಮುರನಾಳ ನೇತೃತ್ವದ ತಂಡ ಜಾಗಟೇಬಾಲ್ ಪ್ರದೇಶದ ಮ್ಯಾಂಗೋ ಫಾರ್ಮ್ ಹತ್ತಿರ ದಾಳಿ ನಡೆಸಿದೆ. ಇಲ್ಲಿ ವಧೆಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು ₹9 ಲಕ್ಷ ಮೌಲ್ಯದ 9 ಜಾನುವಾರುಗಳನ್ನು ರಕ್ಷಿಸಲಾಗಿದೆ.
ಅಬ್ದುಲ್ ರೆಹಮಾನ ಅವರ ಮಗ ಮುಸದ್ದೀಕ್ (36) ಮತ್ತು ಆತನ ಸಹಚರರು ಯಾವುದೇ ಅನುಮತಿ ಪಡೆಯದೇ ಈ ಕೃತ್ಯದಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪಿಎಸ್ಐ ಮಲ್ಲಿಕಾರ್ಜುನ ಕೊರಾಣಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಅಕ್ರಮ ಜಾನುವಾರು ಸಾಗಾಟ ಮತ್ತು ಗೋಹತ್ಯೆ ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
