ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಸ್ತೆ ಹೊಂಡವೇ ಅಪಾಯ ತಂದಿಟ್ಟ ದುರಂತ ಘಟನೆ ಬುಧವಾರ ಸಂಜೆ ಯಲ್ಲಾಪುರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಹುಬ್ಬಳ್ಳಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹೊರಟ್ಟಿ ಅವರ ವಾಹನ ಡೊಮಗೆರೆ ಕ್ರಾಸ್ ಬಳಿ ಬಂದಾಗ, ರಸ್ತೆಯ ಭಾರೀ ಹೊಂಡದಲ್ಲಿ ಕಾರಿನ ಟೈರ್ ಸಿಲುಕಿ ಸಿಡಿದಿದ್ದು (ಬ್ಲಾಸ್ಟ್), ಆಘಾತದಿಂದ ಅವರ ಕೈಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಬಹುತೇಕ ರಸ್ತೆಗಳಲ್ಲಿ ಹೊಂಡಗಳ ಹಾವಳಿ ಮುಂದುವರಿದಿದ್ದು, ಚಾಲಕರಿಗೆ ವಾಹನ ಚಲಾಯಿಸುವುದೇ ಸವಾಲಾಗಿದೆ. ಸಭಾಪತಿಗಳ ಹೈಟೆಕ್ ಕಾರಿನೂ ಹೊಂಡದ ಬಲೆಗೆ ಸಿಕ್ಕಿದೆ ಎಂದರೆ, ಸಾಮಾನ್ಯ ಜನರ ವಾಹನಗಳ ಸ್ಥಿತಿ ಹೇಗಿರಬಹುದು ಎನ್ನುವುದು ಊಹೆಗೇ ಸಿಗುತ್ತದೆ.
ಈ ಘಟನೆ ಸರ್ಕಾರದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾವತಿಸುವ ಜನರ ಹಕ್ಕುಗಳ ಕುರಿತಾಗಿ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಘಟನೆಯ ನಂತರ ಹೊರಟ್ಟಿ ಅವರು ತಮ್ಮ ಆತ್ಮೀಯರಾದ ಪ್ರಮೋದ ಹೆಗಡೆಯವರನ್ನು ಸಂಪರ್ಕಿಸಿ, ಅವರ ಕಾರಿನ ಮೂಲಕ ಕಲಘಟಗಿಯವರೆಗೆ ತೆರಳಿದರು. ಬಳಿಕ ಧಾರವಾಡದ ಡಿಸಿ ಮತ್ತೊಂದು ವಾಹನ ಕಳುಹಿಸಿದ್ದಾಗಿ ತಿಳಿದುಬಂದಿದೆ.


