ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಕಳ್ಳತನ ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಳಿಯಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಹಮದ್ ಇಸಾಕ್ ಅಬ್ದುಲ್ ರೇಹಮಾನ್ ಸೌಧಾಗಾರ ಎಂದು ಗುರುತಿಸಲಾಗಿದೆ. ಈತ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪರಾರಿಯಾಗಿದ್ದರಿಂದ, ಆತನ ಬಂಧನಕ್ಕಾಗಿ ಹಳಿಯಾಳ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆರೋಪಿತನು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಬಂಧನ ಕಾರ್ಯಾಚರಣೆ ಎಸ್ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಹಾಗೂ ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ್ ಪಾಟೀಲ್ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜ ಮಬನೂರ (ಕಾ & ಸು) ಮತ್ತು ಕೃಷ್ಣಾ ಅರಕೇರಿ (ತನಿಖೆ) ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಶೈಲ್ ಜಿ.ಎಂ., ಲಕ್ಷ್ಮಣ ಪೂಜಾರಿ, ಸಿಪಿಸಿ ಅರವಿಂದ ಭಜಂತ್ರಿ, ವಿನೋದ್ ಜಿ.ಬಿ. ಹಾಗೂ ರಾಘವೇಂದ್ರ ಕೆರವಾಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

