ಕಾರವಾರ: ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಮಾನಭಂಗ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷಗಳ ಕಠಿಣ ಶಿಕ್ಷೆ ಹಾಗೂ 8,000 ರೂ. ದಂಡ ವಿಧಿಸಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಮಾಜಾಳಿ ಬಜಾರ ಗ್ರಾಮದ ಮನೋಜ ಬಿಕಾಜಿ ಸೈಲ್ ಎಂಬಾತನು 01-10-2019 ರಂದು ರಾತ್ರಿ ಸಂತ್ರಸ್ತೆಯ ಮನೆ ಹಿಂಬದಿಯ ಬಾಗಿಲು ಬಡಿದು, ಬಾಗಿಲು ತೆರೆದಾಗ ಅವರ ಎಡಗೈ ಹಿಡಿದು ಎಳೆಯುವ ಮೂಲಕ ಅಸಭ್ಯ ವರ್ತನೆ ನಡೆಸಿದ್ದನು. ಆ ವೇಳೆ ಪೀಡಿತೆಯನ್ನು ರಕ್ಷಿಸಲು ಬಂದ ಸಾಕ್ಷಿದಾರರ ಕೈಗೂ ಗಾಯಮಾಡಿ ಪರಾರಿಯಾಗಿದ್ದನು.
ಈ ಪ್ರಕರಣವನ್ನು ಚಿತ್ತಾಕುಲ ಪೊಲೀಸ್ ಠಾಣೆಯ ಎಎಸ್‌ಐ ಪಾಂಡುರಂಗ ಟಿ.ಗೋವೇಕರ ಹಾಗೂ ಪಿಎಸ್‌ಐ ಪ್ರವೀಣ ಕುಮಾರ ತನಿಖೆ ನಡೆಸಿ, ಆರೋಪಿ ವಿರುದ್ಧ ಐಪಿಸಿ ಕಲಂ 354(ಬಿ), 323, 324, 509 ಅಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ದಿನಾಂಕ 29-09-2025 ರಂದು ಪ್ರಧಾನ ಸಿವಿಲ್ ಮತ್ತು ಜೆಎಮ್‌ಎಫ್‌ಸಿ-2 ನೇ ನ್ಯಾಯಾಲಯ, ಕಾರವಾರದ ಮಾನ್ಯ ನ್ಯಾಯಾಧೀಶರಾದ ಧನುರಾಜ್ ಎಸ್.ಎಂ. ಅವರು ಆರೋಪಿಗೆ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 8,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕರಿಯಪ್ಪ ಗೌಡ ವಾದ ಮಂಡಿಸಿದರು.
ಈ ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದಲ್ಲಿ ಸಾಕ್ಷಿದಾರರ ಹಾಜರಾತಿ ಸುಗಮಗೊಳಿಸಲು ಚಿತ್ತಾಕುಲ ಠಾಣಾಧಿಕಾರಿ ಪರುಶರಾಮ ಮಿರ್ಜಗಿ, ಪಿಎಸ್‌ಐ ನರಸಿಂಹಲು, ಹಾಗೂ ಪ್ರೋಸೆಸ್ ಮತ್ತು ಕೋರ್ಟ್ ವಾಚ್ ಸಿಬ್ಬಂದಿಗಳಾದ ಎಎಸ್‌ಐ ಸಂತೋಷ ನಾಯ್ಕ, ಸಿಎಚ್‌ಸಿ ಶ್ರೀಕಾಂತ ನಾಯ್ಕ, ಸಿಪಿಸಿ ಆಂಜನೇಯ ಎಚ್.ಕೆ., ಸಿಪಿಸಿ ಗಣೇಶ ನಾಯ್ಕ ಮುಂತಾದವರು ಶ್ರಮಪಟ್ಟಿದ್ದಾರೆ.
ಸದರಿ ಪ್ರಕರಣದಲ್ಲಿ ಆರೋಪಿ ಶಿಕ್ಷೆಗೆ ಗುರಿಯಾಗುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಶ್ಲಾಘಿಸಿದ್ದಾರೆ.


