ಕಾರವಾರ
ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕದ್ರಾ ಠಾಣೆಯ ಪೊಲೀಸ್ ಅಧಿಕಾರಿಗಳು ಕಾರವಾರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಮೂಲದ ಎಲಿಯಾಸ್ ಜೋಸೆಫ್ ಫರ್ನಾಂಡಿಸ್ ಬಂಧಿತ ಆರೋಪಿ. 1990ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಏಳು ಜನ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಆರೋಪಿ ಎಲಿಯಾಸ್ ವಿಚಾರಣಾ ಅವಧಿಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಕೂಡ ಹೊರಡಿಸಿದ್ದು, ಪೊಲೀಸರು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದರು.
ಈಚೆಗೆ ಪಿಎಸ್‌ಐ ಸುನೀಲ ಬಂಡಿವಡ್ಡರ ಅವರ ತಂಡವು ಖಚಿತ ಮಾಹಿತಿ ಆಧರಿಸಿ ಸೋಮವಾರ ಕಾರವಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ಮಾಧವ ಫಳ್, ಸಂತೋಷ ತಳೇಕರ, ಸಿಬ್ಬಂದಿ ತನೋಜ ಬೈಲೂರ, ಪ್ರದೀಪ ದುಮ್ಯಾಲ್, ಅಶೋಕ ದೇವರಮನಿ, ಮಹೇಶ ಸಾಂವಸಗಿ, ವಿಠಲ ಕೋತ್, ಆರೀಪ್ ಕಟಗಿ ಭಾಗವಹಿಸಿದ್ದರು.

Please Share: