ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ ಭಾರಿ ಗಾತ್ರದ ಗಂಡು ಹುಲಿಯನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಹುಲಿಯನ್ನು ತಲೆಯಿಂದ ಭುಜ, ಭುಜದಿಂದ ಹೊಟ್ಟೆ, ಹೊಟ್ಟೆಯಿಂದ ಕೆಳಗೆ ಮೂರು ಭಾಗವಾಗಿ ಕತ್ತರಿಸಿರುವ ಘೋರ ಘಟನೆ ನಡೆದಿದೆ.

ಈ ಘಟನೆ ಮಹಾತ್ಮ ಗಾಂಧಿ ಜಯಂತಿ ಹಾಗೂ ವನ್ಯಜೀವಿ ಸಪ್ತಾಹದ ದಿನವೇ ನಡೆದಿದ್ದು, ಮಾನವ ಕುಲಕ್ಕೆ ಎಚ್ಚರಿಕೆ ನೀಡುವಂತಾಗಿದೆ. ಪ್ರಾಥಮಿಕವಾಗಿ, ಸ್ಥಳೀಯರು ಸೇಡಿಗಾಗಿ ಹುಲಿಯನ್ನು ಕೊಂದು ತುಂಡರಿಸಿದ್ದಾಗಿರಬಹುದೆಂದು ಅಂದಾಜಿಸಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಮಲೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ 6 ಹುಲಿಗಳು ಮನುಷ್ಯನ ದುಷ್ಕೃತ್ಯಕ್ಕೆ ಬಲಿಯಾಗಿ ಮೃತಪಟ್ಟಿವೆ. ಈ ವರ್ಷದ ಆರಂಭದಿಂದ ಮೈಸೂರು ಭಾಗದ ಅರಣ್ಯ ಪ್ರದೇಶಗಳಲ್ಲಿ ಒಟ್ಟು 15 ಹುಲಿಗಳು ಸಾವಿಗೀಡಾಗಿವೆ.

ತನಿಖೆಗೆ ಖಂಡ್ರೆ ಆದೇಶ

ಬೆಂಗಳೂರು: ವನ್ಯಜೀವಿ ಸಪ್ತಾಹದ ಆರಂಭದ ದಿನ ಮಲೆ ಮಹದೇಶ್ವರ ಬೆಟ್ಟ ಹನೂರು ಅರಣ್ಯ ವಲಯದಲ್ಲಿ ನಡೆದಿರುವ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ನೇತೃತ್ವದ ತಂಡಕ್ಕೆ ತಕ್ಷಣ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

ಸಚಿವರು ಸೂಚಿಸಿದಂತೆ, ಪಚ್ಚೆದೊಡ್ಡಿ ಹತ್ತಿರ ಸತ್ತ ಹುಲಿಯ ಸ್ಥಳ ಪರಿಶೀಲನೆ ಮಾಡಿ, ಕಳೆದ 3 ವರ್ಷದ ಕಳ್ಳಬೇಟೆ ಪ್ರಕರಣಗಳ ವರದಿಗಳನ್ನು ಪರಿಶೀಲಿಸಿ, ಕಾನೂನು ಕ್ರಮದ ಶಿಫಾರಸು ಸಹಿತ ಮುಂದಿನ 8 ದಿನಗಳಲ್ಲಿ ವರದಿ ಸಲ್ಲಿಸಲು ಆದೇಶಿಸಲಾಗಿದೆ.

 

 

Please Share: