ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ದೀಪಾವಳಿಯ ದೀಪ ಬೆಳಗುವ ಮುನ್ನವೇ ಭಾವಿಕೇರಿಯ ಮನೆಯಲ್ಲಿ ಕತ್ತಲೆಯ ಕಂಗಾಲು ಆವರಿಸಿದೆ. ಪತ್ನಿಯು ಮನೆಗೆ ಬಾರದ ಬೇಸರದಲ್ಲಿ ಯುವಕನೊಬ್ಬ ಜೀವ ಬಲಿ ಕೊಟ್ಟ ಘಟನೆ ಸೋಮವಾರ ಮುಂಜಾನೆ ಅಂಕೋಲಾದ ಭಾವಿಕೇರಿಯಲ್ಲಿ ನಡೆದಿದೆ.

ಮೃತ ಶಿವಾನಂದ ಶಂಕರ್ ಆಗೇರ (34) ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದವರು. ಕೆಲಕಾಲದಿಂದ ಸಾಲದ ಒತ್ತಡದಲ್ಲಿದ್ದು, ಪತ್ನಿಯೊಂದಿಗೆ ಸಣ್ಣ ವೈಮನಸ್ಸು ಉಂಟಾಗಿತ್ತು. ಆದರೆ, ದೀಪಾವಳಿಗೆ ಪತ್ನಿ ಮನೆಗೆ ಬರುವಾಳೆಂಬ ವಿಶ್ವಾಸ ಅವರ ಮನದಲ್ಲಿ ಉಳಿದಿತ್ತು.

ಆದರೆ ನಿರೀಕ್ಷೆ ವಿಫಲವಾಯಿತು. ಹಬ್ಬದ ಬೆಳಕು ಬರಬೇಕಿದ್ದ ಮನೆಯಲ್ಲಿ ನಿರಾಶೆಯ ಕತ್ತಲೆ ಆವರಿಸಿತು. ಅಕ್ಟೋಬರ್ 21ರ ಮುಂಜಾನೆ 1.45ರ ಸುಮಾರಿಗೆ ಮನೆಯಲ್ಲಿ ಚಿಲಕ ಹಾಕಿ, ವೇಲಿಗೆ ನೇಣು ಬಿಗಿದುಕೊಂಡರು.

ಬೆಳಗ್ಗೆ ಅಕ್ಕ ಭಾರತಿ ಮಂಜು ಆಗೇರ ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿದರೂ ಒಳಗಿನಿಂದ ಲಾಕ್. ಕಿಟಕಿಯಿಂದ ನೋಡಿದಾಗ ದೃಶ್ಯವನ್ನು ಕಂಡು ಕಂಗಾಲಾದರು — ತಮ್ಮನ ಶವ ವೇಲಿಗೆ ನೇತು ಹಾಕಿದ ಸ್ಥಿತಿಯಲ್ಲಿ! ತಕ್ಷಣ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಶವಾಗಾರಕ್ಕೆ ಕಳುಹಿಸಿದರು. ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಮಾತಿನಲ್ಲಿ — “ದೀಪಾವಳಿಯ ದಿನವೂ ಮನದ ಬಿರುಕೇ ಪ್ರಾಣ ಕಿತ್ತುಕೊಂಡಿದೆ. ಎಷ್ಟು ಚಿಕ್ಕ ವಿಷಯಕ್ಕೂ ಜೀವ ಕೊಡಬಾರದು, ಜೀವನ ದೊಡ್ಡದು” ಎಂದು ಬೇಸರ ವ್ಯಕ್ತಪಡಿಸಿದರು.

 

 

Please Share: