ಕರಾವಳಿ ವಾಯ್ಸ್ ನ್ಯೂಸ್
ಗುರಿ ಮುಟ್ಟದೇ ಇರುವ ಹೋರಾಟಗಳ ಮೂಲಕವೇ ಪ್ರಚಾರಪಡೆಯಲು ಬಯಸುತ್ತಿರುವ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಈವರೆಗೆ ರೈತರ ಪರವಾಗಿ ಈವರೆಗೆ ಒಂದೇ ಒಂದು ಹೋರಾಟವನ್ನು ಮಾಡಿಲ್ಲ. ರೈತರ ಸಮಸ್ಯೆ ಆಲಿಸಲು ಅವರಿಗೆ ಸಮಯವೇ ಸಿಗುತ್ತಿಲ್ಲ.
ಅನಂತಮೂರ್ತಿ ಹೆಗಡೆ ರಿಯಲ್ ಎಸ್ಟೇಟ್ ಉದ್ಯಮಿ. ರೈತರ ಭೂಮಿಯನ್ನು ಪರಿವರ್ತನೆ ಮಾಡಿ ಮಾರಾಟ ಮಾಡುವುದು ಅವರ ವೃತ್ತಿ. ಅಂಥವರಿಗೆ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಹುದ್ದೆ ನೀಡಿದ್ದು, ಶಿರಸಿ ಪ್ರತ್ಯೇಕ ಜಿಲ್ಲೆಯಾದರೆ ಲೇಔಟಿನಲ್ಲಿರುವ ಸೈಟುಗಳ ಬೆಲೆ ಏರಿಕೆ ಆಗಲಿದೆ ಎಂಬುದು ಅವರ ಆಂತರಿಕ ಲೆಕ್ಕಾಚಾರ. ಹೀಗಾಗಿ ಅವರು ಉತ್ತರ ಕನ್ನಡ ಜಿಲ್ಲೆಯನ್ನು ಒಡೆಯುವುದಕ್ಕಾಗಿ ಕಳೆದ ವರ್ಷ ಹೋರಾಟ ಶುರು ಮಾಡಿದ್ದರು. ಜಿಲ್ಲೆಯ ಜನರನ್ನು ಒಡೆದು ಆಳಲು ಅವರು ಅನುಸರಿಸಿದ ರೀತಿ ಯಶಸ್ಸು ಕಾಣಲಿಲ್ಲ. ಅದಾಗಿಯೂ ಬೆಳಗಾವಿಯ ಸುವರ್ಣಸೌಧಕ್ಕೆ ಹೋಗಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಸಿದ್ದು, ಈ ವರ್ಷದ ಅಧಿವೇಶನಕ್ಕೆ ಆ ಹೋರಾಟವನ್ನು ಅಲ್ಲಿಗೆ ಬಿಟ್ಟರು.
ಈ ವರ್ಷ ಶಿರಸಿ ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ಹೋರಾಡುತ್ತಿದ್ದಾರೆ. ಬೆಳೆ ವಿಮೆ ಪರಿಹಾರ ಸಮಸ್ಯೆ, ಕಬ್ಬು ಬೆಳೆಗಾರರಿಗೆ ದರ ಸಮಸ್ಯೆ, ಅಡಿಕೆಗೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗ ಸೇರಿ ನಾನಾ ಸಮಸ್ಯೆಗಳಿಂದ ರೈತರು ಹೈರಣಾಗಿದ್ದರೂ ರೈತ ಮೋರ್ಚಾ ಉಪಾಧ್ಯಕ್ಷರಾಗಿರುವ ಅನಂತಮೂರ್ತಿ ಆ ಬಗ್ಗೆ ಮಾತನಾಡುತ್ತಿಲ್ಲ. ಸೊಪ್ಪಿನ ಬೆಟ್ಟದ ಕಾನೂನು, ಹೈನುಗಾರರು ಅನುಭವಿಸುತ್ತಿರುವ ನೋವು, ಆನೆ ಹಾವಳಿ, ಇನ್ನಿತರ ಕಾಡುಪ್ರಾಣಿಗಳ ಉಪಟಳ, ಅತಿಕ್ರಮಣ ಪ್ರದೇಶದಲ್ಲಿನ ರೈತರು ಅನುಭವಿಸುವ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಸಹ ಅನಂತಮೂರ್ತಿ ಹೆಗಡೆ ಆಸಕ್ತರಾಗಿಲ್ಲ.
ಅಂದ ಹಾಗೇ, ಅನಂತಮೂರ್ತಿ ಹೆಗಡೆ ಮಾಡಿದ ಯಾವ ಹೋರಾಟವೂ ಈವರೆಗೆ ಗುರಿ ಮುಟ್ಟಿಲ್ಲ. ಪ್ರತಿ ಬಾರಿಯೂ ಹೊಸ ಹೊಸ ವಿಷಯಗಳ ಬಗ್ಗೆ ಹೋರಾಟ ನಡೆಸುವ ಅನಂತಮೂರ್ತಿ ಹೆಗಡೆ ಹಳೆ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ಎರಡು ಬಾರಿ ಮಾತ್ರ ರೈತರ ಕೆಲಸಕ್ಕೆ ಬೆನ್ನೆಲುಬಾದ ಕೊನೆ ಗೌಡರಿಗೆ ಇನ್ಸುರೆನ್ಸ ಮಾಡಿಸುವುದಾಗಿ ಅನಂತಮೂರ್ತಿ ಹೆಗಡೆ ಹೇಳಿದ್ದು, ಮಾಡಿಸಿದ ಇನ್ಸುರೆನ್ಸ ಮೊತ್ತಕ್ಕಿಂತಲೂ ರಿಕ್ಷಾ ಹಿಂದೆ ಹಾಕಿದ ಪ್ರಚಾರ ಬೋರ್ಡಿನ ಮೊತ್ತ ದೊಡ್ಡದು ಎಂಬುದು ಸುಳ್ಳಲ್ಲ. ನಂತರ ವಿಮಾ ನವೀಕರಣ ಅವಧಿಯಲ್ಲಿ ಅನಂತಮೂರ್ತಿ ಕೊನೆ ಗೌಡರ ಸಂಪರ್ಕಕ್ಕೆ ಸಹ ಸಿಗಲಿಲ್ಲ.
ಈಗಲೂ ತಲೆಬುಡವಿಲ್ಲದ ಹೋರಾಟ ಮಾಡುತ್ತಿರುವ ಅನಂತಮೂರ್ತಿ ತಮ್ಮದೇ ಆದ ಹೊಗಳುಬಟ್ಟರನ್ನು ಹೊಂದಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆಯವರ ಸಂಪರ್ಕಕ್ಕೆ ಅವರು ಸಿಗುತ್ತಿಲ್ಲ.

