ಕಾರವಾರ: “ಜನರ ಜೀವವೇ ಮುಖ್ಯ, ಸುರಕ್ಷತೆಯ ನೆಪದಲ್ಲಿ ತಾತ್ಕಾಲಿಕ ಬಂದ್ ಮಾಡುವುದು ಪರಿಹಾರವಲ್ಲ!” — ರಸ್ತೆಗಳ ದುಸ್ಥಿತಿಗೆ ಹಾಗೂ ಅಪಾಯಕಾರಿ ಪರ್ಯಾಯ ಮಾರ್ಗಗಳಿಂದ ಹೆಚ್ಚುತ್ತಿರುವ ಅಪಘಾತಗಳಿಗೆ ಖಾರವಾದ ಶಬ್ದದಲ್ಲಿ ಆಕ್ರೋಶ ವ್ಯಕ್ತಪಡಿಸಿದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊನ್ನಾವರ-ಭಟ್ಕಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗಳು ಅಸ್ಥಿರವಾಗಿರುವ ಕಾರಣ ನೀಡಿ ಅಧಿಕಾರಿಗಳು ಸಂಚಾರ ನಿರ್ಬಂಧ ಹೇರಿರುವುದನ್ನು ಉಲ್ಲೇಖಿಸಿ, “ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವ ಬದಲು ಜನರನ್ನು ಅಪಾಯಕರ ದಾರಿಯಲ್ಲಿ ಓಡಿಸುತ್ತಿದ್ದಾರೆ. ಇದು ಸಾರ್ವಜನಿಕರ ಸುರಕ್ಷತೆಯನ್ನು ಹಾಸ್ಯಾಸ್ಪದ ಮಾಡುವಂತಾಗಿದೆ” ಎಂದು ಎಚ್ಚರಿಸಿದರು.
ಅವರು ಕಾರವಾರ-ಅಂಕೋಲಾ ಸುರಂಗ ದಾರಿಯ ಏಕಮುಖ ಸಂಚಾರದಿಂದ ಅಪಘಾತಗಳು ಹೆಚ್ಚುತ್ತಿರುವುದನ್ನೂ ಖಂಡಿಸಿದರು. “ಪರ್ಯಾಯ ಮಾರ್ಗದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಜವಾಬ್ದಾರಿ ಹೊರುವುದಕ್ಕೆ ಅಧಿಕಾರಿಗಳು ಸಿದ್ಧರಿದ್ದೀರಾ?” ಎಂದು ಕಿಡಿಕಾರಿದ ಕಾಗೇರಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.


