ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಕರಾವಳಿ ಪ್ರದೇಶದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ನೌಕಾಪಡೆ, ತಟರಕ್ಷಕ ಪಡೆ, ಕರಾವಳಿ ಕಾವಲು ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತ ನೇತೃತ್ವದಲ್ಲಿ ಎರಡು ದಿನಗಳ ‘ಸಾಗರ ಕವಚ’ ಅಣುಕು ಕಾರ್ಯಾಚರಣೆ ನಾಳೆ (ಗುರುವಾರ) ಆರಂಭವಾಗಲಿದೆ.

ಈ ಅಭ್ಯಾಸದ ವೇಳೆ ಕರಾವಳಿಯ ಸಮುದ್ರ ತೀರದಿಂದ ಒಳನಾಡಿನವರೆಗೆ ವ್ಯಾಪಕ ಭದ್ರತಾ ಕವಚ ಹಾಸಲಾಗುತ್ತಿದೆ. ಉಗ್ರ ಚಟುವಟಿಕೆಗಳು ಅಥವಾ ಭದ್ರತಾ ಸವಾಲುಗಳ ವಿರುದ್ಧ ಪೊಲೀಸ್ ಇಲಾಖೆ ಸಿದ್ಧತೆ ಹೇಗಿದೆ ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.

ರೆಡ್ ಫೋರ್ಸ್ – ಬ್ಲೂ ಫೋರ್ಸ್ ರಣತಂತ್ರ

ಕಾರ್ಯಾಚರಣೆಯಲ್ಲಿ ಭಾಗವಹಿಸುವ ವಿವಿಧ ಭದ್ರತಾ ಪಡೆಗಳನ್ನು ಎರಡು ವಿಭಾಗಗಳಾಗಿ ವಿಭಜಿಸಲಾಗಿದೆ – ರೆಡ್ ಫೋರ್ಸ್ ಮತ್ತು ಬ್ಲೂ ಫೋರ್ಸ್. ರೆಡ್ ಫೋರ್ಸ್‌ನ ನೌಕಾ ಸಿಬ್ಬಂದಿ ಮಾರುವೇಷದಲ್ಲಿ ಬಂದು “ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು” ಆಯ್ದ ಸ್ಥಳಗಳಲ್ಲಿ ಇರಿಸಲಿದ್ದಾರೆ. ಇವುಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಜವಾಬ್ದಾರಿ ಬ್ಲೂ ಫೋರ್ಸ್‌ನ ಪೊಲೀಸ್ ತಂಡದ ಮೇಲಿದೆ.

ವಾಣಿಜ್ಯ ಹಾಗೂ ಮೀನುಗಾರಿಕೆ ಬಂದರುಗಳು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನೌಕಾನೆಲೆ, ಕಾಳಿ ಸೇತುವೆ, ಮಲ್ಲಾಪುರ, ಕದ್ರಾ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮುಖ್ಯ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಯಲಿದ್ದು, ಕಾಳಿ ಸೇತುವೆ, ಬೈತಖೋಲ, ಅರಗಾ, ಮುದಗಾ ಮೊದಲಾದ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಕರಾವಳಿಯುದ್ದಕ್ಕೂ ಬಿಗಿ ಬಂದೋಬಸ್ತ್

ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕರಾವಳಿಯ ಬಸ್ ನಿಲ್ದಾಣಗಳು, ಹೆದ್ದಾರಿಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ತಟರಕ್ಷಕ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಕಡಲಿನೊಳಗೆ ಗಸ್ತು ತಿರುಗಲಿದ್ದಾರೆ.

ನಾಗರಿಕರಿಗೆ ವಿನಂತಿ

ಅಣುಕು ಕಾರ್ಯಾಚರಣೆಯ ಸಮಯದಲ್ಲಿ ವಾಹನ ತಪಾಸಣೆ ಹಾಗೂ ಭದ್ರತಾ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

 

Please Share: