ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಪಟ್ಟಣದ ಕಿಲ್ಲೆ ಓಣಿಯ ಖಾದರಲಿಂಗ್ ಬಳಿ ಇರುವ ಯೂನುಸ್ ಹೊಸಕೊಪ್ಪ ಇವರ ಕಟ್ಟಿಗೆ ಅಡ್ಡೆಯಲ್ಲಿ ರವಿವಾರ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕಿ ಅವಘಡ ನಡೆದಿದೆ. ಘಟನೆಯಿಂದ ಸುಮಾರು 50 ಲಕ್ಷ ರೂ. ಮೌಲ್ಯದ ಸಾಮಗ್ರಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಅತಿ ವೇಗವಾಗಿ ಆವರಿಸಿದ ಪರಿಣಾಮ ಸಾಗುವಾನಿ ಫರ್ನಿಚರ್, ವಿವಿಧ ಮರದ ಸಾಮಗ್ರಿಗಳು ಹಾಗೂ ಅಡ್ಡೆಯಲ್ಲಿ ಇದ್ದ ಯಂತ್ರೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೇ ಅಡ್ಡೆಯಲ್ಲಿ ನಿಲ್ಲಿಸಲಾಗಿದ್ದ ನೂತನ ಕಾರಿಗೂ ಬೆಂಕಿ ತಗುಲಿ ದೊಡ್ಡ ಮಟ್ಟದ ಹಾನಿಯಾಗಿದೆ.
ಅಡ್ಡೆಯ ಪಕ್ಕದಲ್ಲಿದ್ದ ಅಯಾನ್ ಹಾನಗಲ್ ಅವರ ಹಾರ್ಡ್‌ವೇರ್ ಗೋಡೌನ್‌ಗೂ ಬೆಂಕಿ ವ್ಯಾಪಿಸಿ ಅಪಾರ ಮೌಲ್ಯದ ವಸ್ತುಗಳು ನಾಶಗೊಂಡಿವೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸುತ್ತಿದ್ದರಿಂದ ಕ್ಷಣಕ್ಷಣವೂ ಆತಂಕ ಹೆಚ್ಚಾಗಿತ್ತು.
ಸೂಚನೆ ದೊರಕಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾದರು. ಬೆಂಕಿಯ ತೀವ್ರತೆಯಿಂದ ಕೆಲಕಾಲ ಸ್ಥಳೀಯರಲ್ಲಿ ಗಾಬರಿ ಉಂಟಾಗಿತ್ತು.
ಘಟನೆ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಗೊಳಗಾದ ಪ್ರದೇಶ ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ.
ಅಪಘಾತದ ನಿಖರ ಕಾರಣ ಮತ್ತು ಅಂದಾಜು ಹಾನಿ ಬಗ್ಗೆ ತನಿಖೆ ಮುಂದುವರಿದಿದೆ.

