ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಾರ್ವಜನಿಕ ವಿತರಣಾ ಪದ್ಧತಿಯ ಅಡಿಯಲ್ಲಿ ಚೀಟಿದಾರರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿ ಆಟೋ ಬಿಟ್ಟು ಪರಾರಿಯಾದ ಘಟನೆ ಬುಧವಾರ ಕಾರವಾರದ ಒಕ್ಕಲಕೇರಿ–ಬಿಣಗಾ ಹತ್ತಿರ ಬೆಳಕಿಗೆ ಬಂದಿದೆ.

ಆಹಾರ ಶಿರಸ್ತೇದಾರರಾದ ದೀಪಕ ಗಣಪತಿ ನಾಯ್ಕ, ತಹಶೀಲ್ದಾರ ಕಚೇರಿ ಕಾರವಾರ ಅವರು ಬುಧವಾರ ರಂದು ಸಂಜೆ 4.30ಕ್ಕೆ ನೀಡಿದ ಗಣಕೀಕೃತ ದೂರು ಪ್ರಕಾರ, ಆರೋಪಿತನಾದ ದಿನೇಶ ನಾರಾಯಣ ನಾಯ್ಕ, ಸಾ. ಬಾವಿಕೇರಿ, ಅಂಕೋಲಾ, ಸಾರ್ವಜನಿಕ ವಿತರಣೆ ಯೋಜನೆಯ ಅಡಿಯಲ್ಲಿ ಕೊಡಲಾದ 5 ಕ್ವಿಂಟಲ್ 44 ಕೆಜಿ 810 ಗ್ರಾಂ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ, ಮಾರುಕಟ್ಟೆ ಮೌಲ್ಯ ₹18,519 ಇರುವ ಈ ಅಕ್ಕಿಯನ್ನು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಕೆಎ–30/ಇ 0928 ಸಂಖ್ಯೆಯ ಆಟೋದಲ್ಲಿ ಕಾರವಾರದಿಂದ ಅಂಕೋಲಾಕ್ಕೆ ಸಾಗಾಟ ಮಾಡುತ್ತಿದ್ದನು.

ಬುಧವಾರ ಮಧ್ಯಾಹ್ನ 2.30ರ ವೇಳೆಗೆ ಹಳೆ ರಾಷ್ಟ್ರೀಯ ಹೆದ್ದಾರಿ 66ರ ಒಕ್ಕಲಕೇರಿ, ಬಿಣಗಾ ಹತ್ತಿರ ತಪಾಸಣೆ ಸಂದರ್ಭದಲ್ಲಿ ಚಾಲಕ ಆಟೋ ರಿಕ್ಷಾವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ವಾಹನದಲ್ಲಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ, ಅಗತ್ಯ ವಸ್ತುಗಳ ಅಧಿನಿಯಮ 1955ರ ಕಲಂ 3 ಮತ್ತು 7 ರಂತೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಪರಾರಿಯಾದ ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

 

Please Share: