ಯಲ್ಲಾಪುರ: ಬಳ್ಳಾರಿ–ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಟ್ರಕ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನಪ್ಪಿದ್ದಾರೆ.
ಯಲ್ಲಾಪುರದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕಿರವತ್ತಿ ಬೈಲಂದೂರು ಗ್ರಾಮದ ನಿವಾಸಿ ಚಾಯಪ್ಪ ಅನಂತ ಸೋಮಾಪುರಕರ (47) ಅವರನ್ನು, ಎದುರಿನಿಂದ ಬರುತ್ತಿದ್ದ ಟ್ರಕ್ ಅಲ್ಕೇರಿ ಗೌಳಿವಾಡದ ಬಳಿ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ಬೈಕ್‌ನಲ್ಲಿ ಹಿಂಬದಿ ಸವಾರನಾಗಿದ್ದ ಪ್ರಭಾಕರ ಗಂಗಾಧರ ಸೋಮಾಪುರಕರ (45) ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕತ್ಸೆ ಫಲಕಾರಿಯಾಗದೇ ಮೃಪಟ್ಟಿದ್ದಾನೆ.
ಮೃತದೇಹವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


