ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಸಾಹಸ ಪ್ರದರ್ಶನದ ಆಸೆ ಜೀವಂತ ಕನಸನ್ನೇ ನುಂಗಿಹಾಕಿದೆ! ಮುದಗಾ ಸಮುದ್ರ ದಂಡೆಯ ಮೇಲೆ ಡೈ ಹೊಡೆಯುವ ವೇಳೆ ದೇಹದ ಸ್ವಾಧೀನ ಕಳೆದುಕೊಂಡ ಯುವಕನ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಅಪಘಾತಕ್ಕೊಳಗಾದ ಯುವಕ ರಕ್ಷಕ ಬಲೇಗಾರ (22). ದಂಡೆಯ ಮೇಲಿಂದ ಸಮುದ್ರಕ್ಕೆ ಡೈ ಹೊಡೆಯುವ ವೇಳೆ ನೀರಿನ ಆಳದ ಅಂದಾಜಿಲ್ಲದೇ ತಲೆಭಾಗ ನೇರವಾಗಿ ಸಮುದ್ರದ ಉಸುಕಿನ ನೆಲಕ್ಕೆ ಬಡಿದ ಪರಿಣಾಮ ಕುತ್ತಿಗೆ ಹಾಗೂ ಬೆನ್ನುಹುರಿಗೆ ತೀವ್ರ ಗಾಯಗೊಂಡಿದ್ದು, ತಲೆಯಿಂದ ಎದೆವರೆಗಿನ ಭಾಗ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ.
ಮೊದಲಿಗೆ ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ ರಕ್ಷಕನನ್ನು ನಂತರ ಗಂಭೀರ ಸ್ಥಿತಿಯಲ್ಲಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಗಂಟಲ ಒಳಗಿನ ಭಾಗಕ್ಕೂ ಗಾಯವಾಗಿರುವ ಸಾಧ್ಯತೆ ಇದ್ದು, ಈಗಾಗಲೇ ಆಹಾರ ಸೇವನೆಯೂ ಅಸಾಧ್ಯವಾಗಿದೆ.
ಸಮುದ್ರದ ಆಳ ತಿಳಿಯದೇ “ಸಾಹಸ” ಮಾಡಲು ಮುಂದಾದ ಯುವಕನ ಈಜು ಪ್ರಯೋಗ ದುರಂತ ಅಂತ್ಯ ಕಂಡಿದ್ದು, ಸ್ಥಳೀಯರಲ್ಲಿ ಶೋಕ ತರಂಗ ಹರಡಿಸಿದೆ.
“ಸಮುದ್ರದ ಸೌಂದರ್ಯ ಆಕರ್ಷಕವಾದರೂ ಅದು ಎಷ್ಟು ಅಪಾಯಕರವೋ ತಿಳಿಯಬೇಕು” ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.


