ಶಿರಸಿ: ಶಿರಸಿಯಲ್ಲಿ ಮತ್ತೆ ಮಂಗಗಳನ್ನು ಓಡಿಸಲು ಹಾರಿಸಿದ ಏರ್‌ಗನ್ ಗುಂಡು ಆಯತಪ್ಪಿ ಬಾಲಕನಿಗೆ ಬಿದ್ದು, ವೈದ್ಯರ ಹರಸಾಹಸದಿಂದ ಬಾಲಕನ ಜೀವ ಉಳಿದಿದೆ. ಮಂಗನಿಗೆ ಹೊಡೆದ ಗುಂಡು ಬಾಲಕನ ಕುಂಡೆಗೆ ಬಿದ್ದ ದುರ್ಘಟನೆ ತಾಲೂಕಿನ ನರೂರಿನಲ್ಲಿ ನಡೆದಿದೆ.

ತಿಂಗಳ ಬಳಿಕ ಶಿರಸಿಯಲ್ಲಿ ಮತ್ತೆ ಏರ್‌ಗನ್ ಗುಂಡಿನ ಸದ್ದು ಕೇಳಿಸಿದ್ದು, ಈ ಬಾರಿ ಆ ಗುಂಡು ನಿರಪರಾಧ ಬಾಲಕನ ಕುಂಡೆಗೆ ಬಿದ್ದಿದೆ. ಬನವಾಸಿಯ ಟಿ.ಎಸ್.ಎಸ್ ಆಸ್ಪತ್ರೆಯ ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಬಾಲಕನ ಜೀವ ಉಳಿದ ಘಟನೆ ಶಿರಸಿ ತಾಲೂಕಿನ ನರೂರಿನಲ್ಲಿ ನಡೆದಿದೆ.

ನರೂರಿನ ರಘುನಂದನ ದತ್ತು ಭಟ್ಟ ಅವರ ತೋಟದಲ್ಲಿ ಮಂಗ ಓಡಿಸಲು ನೇಮಿಸಲ್ಪಟ್ಟ ನಾಗರಾಜ ಮಂಜಯ್ಯ ಚನ್ನಯ್ಯ ಎಂಬಾತನು ಏರ್‌ಗನ್ ಹಿಡಿದು ಕಾಡು ಸುತ್ತುತ್ತಿದ್ದ. ಅಕ್ಟೋಬರ್ 9ರಂದು ಸಂಜೆ ಮಂಗ ಓಡಿಸುವ ಪ್ರಯತ್ನದ ವೇಳೆ ನಾಗರಾಜ ಚನ್ನಯ್ಯ ಅವರ ಕೈಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು, ತೋಟದ ಸಮೀಪದ ಸಾತಕೇರೆ ಏರಿಯ ಬಳಿ ಆಟವಾಡುತ್ತಿದ್ದ ಅಣ್ಣಪ್ಪ ನಾಯ್ಕ ಅವರ ಮಗ ಕೌಶಿಕ್ ನಾಯ್ಕ (9) ಅವರ ಕುಂಡೆಗೆ ತಾಗಿತು.

ಗುಂಡಿನಿಂದ ರಕ್ತಸ್ರಾವಗೊಂಡ ಬಾಲಕನನ್ನು ತಕ್ಷಣವೇ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಹರಸಾಹಸ ಪಟ್ಟು ಗುಂಡನ್ನು ಹೊರತೆಗೆದು ಬಾಲಕನ ಜೀವ ಉಳಿಸಿದರು. ಘಟನೆ ನಂತರ ಹೆದರಿದ ನಾಗರಾಜ ಚನ್ನಯ್ಯ ಅವರು ಸ್ಥಳದಿಂದ ಪರಾರಿಯಾಗಿದ್ದರು.

ಅಕ್ಟೋಬರ್ 12ರಂದು ಅಣ್ಣಪ್ಪ ನಾಯ್ಕ ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಪೊಲೀಸರು ನಾಗರಾಜ ಚನ್ನಯ್ಯ ಅವರ ವಿರುದ್ಧ ನಿರ್ಲಕ್ಷ್ಯದಿಂದ ಗಾಯಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಗಮನಾರ್ಹವೆಂದರೆ, ಇದೇ ರೀತಿಯ ಘಟನೆ ಕಳೆದ ಸೆಪ್ಟೆಂಬರ್ 5ರಂದು ಶಿರಸಿಯ ಸೋಮನಳ್ಳಿಯಲ್ಲಿ ನಡೆದಿತ್ತು. ಅಂದೂ ಏರ್‌ಗನ್ ಸಿಡಿತದಿಂದ 9 ವರ್ಷದ ಬಾಲಕ ಕರಿಯಪ್ಪ ಸಾವಿಗೀಡಾಗಿದ್ದ. ಇದೀಗ ಇದೇ ಮಾದರಿಯ ಘಟನೆ ಮರುಕಳಿಸಿರುವುದು ಪೋಷಕರಲ್ಲಿ ಆತಂಕ ಉಂಟುಮಾಡಿದೆ.

 

 

Please Share: