ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ಶಾಂತವಾದ ಮಧ್ಯಾಹ್ನ — ಹಳೆಯ ಟಿ.ಆರ್.ಟಿ ಬಂಗೂರನಗರದ 85 ವರ್ಷದ ಶಾಂತಾ ಯಲ್ಲಪ್ಪ ಪವಾರ ಅವರಿಗೆ ಇದು ಎಂದಿಗೂ ಮರೆಯಲಾಗದ ದಿನ. ಅಪರಿಚಿತರು ಮಾತಿನ ಮಾಯೆಯಿಂದ 2 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಕಸಿದು ಪರಾರಿಯಾದ ಘಟನೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಒಬ್ಬ ಅಪರಿಚಿತ ವ್ಯಕ್ತಿ “ಪೋಸ್ಟ್ ಆಫೀಸರ್ ಕರೆಯುತ್ತಿದ್ದಾರೆ” ಎಂದು ಹೇಳಿ ವೃದ್ಧೆಯನ್ನು ಕರೆದುಕೊಂಡು ಹೋದ. ಹಿಂದಿರುಗುವಾಗ ಇನ್ನೋರ್ವ ವ್ಯಕ್ತಿ ಎದುರಾಗಿ “ಅದಾರಿಯಲ್ಲೆ ಚಾಕು ಹಿಡಿದವರು ತಿರುಗುತ್ತಿದ್ದಾರೆ, ಅಲ್ಲಿ ಹೋಗಬೇಡಿ” ಎಂದು ಎಚ್ಚರಿಸಿದ. ಆತನ ಮಾತಿಗೆ ನಂಬಿದ ಶಾಂತಾ ಯಲ್ಲಪ್ಪ ಅವರಿಗೆ ಆತ “ನಿಮ್ಮ ಚೈನ್ ಸುರಕ್ಷಿತವಾಗಿಡಿ” ಎಂದು ಹೇಳಿ ಅದನ್ನು ಕಾಗದದಲ್ಲಿ ಮಡಿಚಿ ತನ್ನ ಕಿಸೆಯಲ್ಲಿ ಇಟ್ಟಂತೆಯೂ, ಕೈಯಲ್ಲಿದ್ದ ಎರಡು ಬಂಗಾರದ ಬಳೆಗಳನ್ನು ಬೇರೆ ಪೇಪರ್‌ನಲ್ಲಿ ಮಡಿಚಿ ಅವರ ಚೀಲದಲ್ಲಿ ಹಾಕಿದಂತೆಯೂ ತೋರಿಸಿದ.
ಆದರೆ ಕೆಲವೇ ಕ್ಷಣಗಳಲ್ಲಿ ಆ ಇಬ್ಬರು ಪರಾರಿಯಾಗಿದ್ದರು!
ಬಳಿಕ ಶಾಂತಾ ಪವಾರ ಚೀಲ ತೆರೆಯಲು ಹೋಗಿದಾಗ, ಒಳಗೆ ಬಂಗಾರವಲ್ಲ — ಕೇವಲ ಕಲ್ಲಿನ ತುಂಡುಗಳು!
ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ದೊರೆತಿದ್ದು, ಆರೋಪಿಗಳ ಗುರುತು ಪತ್ತೆಗೆ ದಾಂಡೇಲಿ ನಗರ ಠಾಣೆಯ ಪಿಎಸ್‌ಐ ಕಿರಣ ಪಾಟೀಲ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.


