ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ದಾಂಡೇಲಿ ನಗರಸಭೆಯಲ್ಲಿ 34 ವರ್ಷಗಳ ಕಾಲ ದಿನಗೂಲಿ ಆಧಾರದಲ್ಲಿ ಟೈಪಿಸ್ಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೀತಾ ರಾಮಪ್ಪ ತೇರದಾಳ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿ, ಪಿಂಚಣಿ, ಗ್ರಾಚ್ಯುಟಿ ಸೇರಿದಂತೆ ನಿವೃತ್ತಿ ಸೌಲಭ್ಯಗಳನ್ನು ಮರುಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಧಾರವಾಡದ ಹೈಕೋರ್ಟ್ ದ್ವಿಸದಸ್ಯ ಪೀಠವು ಗೀತಾ ತೇರದಾಳ ಸಲ್ಲಿಸಿದ್ದ ರಿಟ್ ಮೇಲ್ಮನವಿಯ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರರು 10 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ ಸೇವೆಯನ್ನು ಕ್ರಮಬದ್ಧಗೊಳಿಸಬೇಕು. ಅವರ 34 ವರ್ಷಗಳ ಸಂಪೂರ್ಣ ಸೇವಾವಧಿಯನ್ನು ಪರಿಗಣಿಸಿ ಪಿಂಚಣಿ, ಗ್ರಾಚ್ಯುಟಿ ಹಾಗೂ ಇತರ ನಿವೃತ್ತಿ ಸೌಲಭ್ಯಗಳನ್ನು ಮರುಪರಿಶೀಲಿಸಿ ಎಂಟು ವಾರಗಳೊಳಗೆ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಆದೇಶ ಪಾಲನೆ ವಿಳಂಬವಾದಲ್ಲಿ ವೇತನದ ಬಾಕಿ ಮೊತ್ತಕ್ಕೆ ಶೇ.50ರಷ್ಟು ಬಡ್ಡಿ ಪಾವತಿಸಬೇಕೆಂದೂ ತಿಳಿಸಿದೆ.
ದಿನಗೂಲಿ ನೌಕರರ ಶೋಷಣೆಗೆ ಅಸಮಾಧಾನ
ಮೂರು ದಶಕಗಳಿಗೂ ಹೆಚ್ಚು ಕಾಲ ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡಿದವರನ್ನು ನಿವೃತ್ತಿಯ ಹಂತದಲ್ಲಿ ಕಾಯಂಗೊಳಿಸಲು ನಿರಾಕರಿಸುವುದು ಶೋಷಣೆಗೆ ಸಮಾನ. ಇಂತಹ ನಡೆ ಮಾದರಿ ಸರ್ಕಾರದ ಲಕ್ಷಣವಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರಿಂದ ದೀರ್ಘಕಾಲ ಶಾಶ್ವತ ಸೇವೆ ಪಡೆಯಲು ಸಾಧ್ಯವಿಲ್ಲ. ಉದ್ಯೋಗಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಸೇವಾವಧಿಯಲ್ಲಿ ಉದ್ಭವಿಸಿದ ನ್ಯಾಯಸಮ್ಮತ ಹಕ್ಕುಗಳು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
34 ವರ್ಷಗಳ ಸೇವೆಗೆ ಸಿಗದ ಕಾಯಂ ಭಾಗ್ಯ
ಗೀತಾ ತೇರದಾಳ ಅವರು ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾದ ಖಾಲಿ ಹುದ್ದೆಗೆ 1988ರ ಜೂನ್ 8ರಂದು ದಾಂಡೇಲಿ ನಗರಸಭೆಯಲ್ಲಿ ದಿನಗೂಲಿ ಆಧಾರದಲ್ಲಿ ನೇಮಕಗೊಂಡಿದ್ದರು. ಟೈಪಿಸ್ಟ್ ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 24 ವರ್ಷಗಳ ಸೇವೆಯ ಬಳಿಕ ಕಾಯಂಗೊಳಿಸುವಂತೆ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿರಲಿಲ್ಲ. ಅಂತಿಮವಾಗಿ 34 ವರ್ಷಗಳ ಸೇವೆ ಸಲ್ಲಿಸಿ 2022ರ ಜೂನ್ನಲ್ಲಿ ನಿವೃತ್ತರಾಗಿದ್ದರು. ಅವರ ಸೇವೆಯನ್ನು ಕಾಯಂಗೊಳಿಸುವಂತೆ ನಗರಸಭೆಯೂ ಶಿಫಾರಸು ಮಾಡಿತ್ತು.
ಆದರೂ ಕಾಯಂ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಗೀತಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಿವೃತ್ತಿ ವಯಸ್ಸು ತಲುಪಿದ ಬಳಿಕ ಸೇವೆಯನ್ನು ಕ್ರಮಬದ್ಧಗೊಳಿಸಲು ಅವಕಾಶವಿಲ್ಲ ಎಂದು ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಇದೀಗ ಅವರಿಗೆ ನ್ಯಾಯ ದೊರೆತಿದೆ.
“ಜೀವಿತಾವಧಿಯ ಬಹುಭಾಗವನ್ನು ದಿನಗೂಲಿ ನೌಕರರಾಗಿ ದುಡಿದವರಿಗೆ ಕಾಯಂ ಉದ್ಯೋಗದ ಭದ್ರತೆ ನೀಡದೆ, ನ್ಯಾಯಕ್ಕಾಗಿ ಕೋರ್ಟ್ ಕಾರಿಡಾರ್ ಅಲೆಯುವಂತೆ ಮಾಡುವ ಪರಿಸ್ಥಿತಿ ಸರ್ಕಾರದ ಕಡೆಯಿಂದ ಬರಬಾರದು.”
— ನ್ಯಾಯಮೂರ್ತಿ ಎಂ. ನಾಗಪ್ರಸನ್ನ


