ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಇಲ್ಲಿನ ಮೇನ್ ಬೀಚ್ನಲ್ಲಿ ಬುಧವಾರ ಸಂಜೆ ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಹಾವೇರಿ ಮತ್ತು ಚಿಕ್ಕಬಳ್ಳಾಪುರ ಮೂಲದ ಮೂವರು ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ಆರು ಮಂದಿ ಗೆಳೆಯರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಸುಳಿಗೆ ಸಿಲುಕಿ ದಡ ಸೇರಲಾಗದೆ ಮುಳುಗುವ ಸ್ಥಿತಿಯಲ್ಲಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜೀವ ರಕ್ಷಕ ಸಿಬ್ಬಂದಿ ಮೂವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ರಕ್ಷಿಸಲ್ಪಟ್ಟವರನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಮದ್ ಅಪ್ಸನ್ ಅಲಿ (21), ಆಶ್ರಫ್ ಮೆಹಬೂಬ್ ಅಲಿ (22) ಹಾಗೂ ಚಿಕ್ಕಬಳ್ಳಾಪುರ ಮೂಲದ ಶ್ರೀನಿವಾಸ ವೆಂಕಟಸ್ವಾಮಿ (35) ಎಂದು ಗುರುತಿಸಲಾಗಿದೆ.
ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಹಾಗೂ ಲೋಕೇಶ್ ಹರಿಕಂತ್ರ ರಕ್ಷಣಾ ಕಾರ್ಯ ನಡೆಸಿದರು. ಲೈಫ್ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಹಾಗೂ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ದೀಪಕ್ ಗೌಡ ಮತ್ತು ಮಹೇಶ್ ಹೊಸಕಟ್ಟೆ ಸಹಕರಿಸಿದರು. ಸಮಯೋಚಿತ ಕಾರ್ಯಾಚರಣೆಯಿಂದ ಮೂವರು ಪ್ರವಾಸಿಗರ ಜೀವ ಉಳಿದಿದೆ.


