ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದೈವಾರ್ಷಿಕ ಚುನಾವಣೆ-2026ರ ಮತದಾನ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಂದು ಉತ್ತರ ಕನ್ನಡ ಜಿಲ್ಲೆಯ ಆಯ್ದ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Banner Ad

ಕಾರವಾರದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕುನ್ನಿಪೇಟೆ; ಸೇಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ; ಶಿರಸಿಯ ಶ್ರೀ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಕೋರ್ಟ್ ರಸ್ತೆ; ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಂದಾನೆ (ಗುಬ್ಬಗೋಡು) ಹಾಗೂ ದಾಂಡೇಲಿಯ ಕೆ.ಎಚ್.ಇ.ಪಿ. ಪ್ರೌಢಶಾಲೆ, ಅಂಬಿಕಾನಗರಗಳಿಗೆ ರಜೆ ಘೋಷಿಸಲಾಗಿದೆ.

ಅದೇ ರೀತಿ ಅಂಕೋಲಾ ತಹಶೀಲ್ದಾರ್ ಕಚೇರಿ, ಕುಮಟಾ ತಹಶೀಲ್ದಾರ್ ಕಚೇರಿ ಮತ್ತು ಗೋಕರ್ಣದ ಉಪ ತಹಶೀಲ್ದಾರ್ ನಾಡಕಚೇರಿ, ಹೊನ್ನಾವರ ತಹಶೀಲ್ದಾರ್ ಕಚೇರಿ ಹಾಗೂ ಹೆರಂಗಡಿ ಗ್ರಾಮ ಪಂಚಾಯಿತಿ ಕಚೇರಿ, ಭಟ್ಕಳ ತಹಶೀಲ್ದಾರ್ ಕಚೇರಿ, ಸಿದ್ದಾಪುರ ತಹಶೀಲ್ದಾರ್ ಕಚೇರಿ ಮತ್ತು ಉಂಬಳಮನೆ ನಾಡಕಚೇರಿ, ಯಲ್ಲಾಪುರ ತಹಶೀಲ್ದಾರ್ ಕಚೇರಿ ಹಾಗೂ ಮಂಚಿಕೇರಿ ನಾಡಕಚೇರಿ, ಮುಂಡಗೋಡ ಮತ್ತು ಹಳಿಯಾಳ ತಹಶೀಲ್ದಾರ್ ಕಚೇರಿಗಳು, ದಾಂಡೇಲಿ ತಾಲೂಕು ಆಡಳಿತ ಸೌಧ ಹಾಗೂ ಜೋಯಿಡಾ ತಹಶೀಲ್ದಾರ್ ಕಚೇರಿ ಮತ್ತು ರಾಮನಗರದ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೂ ರಜೆ ಘೋಷಿಸಲಾಗಿದೆ.

ಭಾರತ ಚುನಾವಣಾ ಆಯೋಗದ ಚುನಾವಣಾ ವೇಳಾಪಟ್ಟಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತದಾರರು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮಾತ್ರ ಪ್ರವೇಶಾವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ, 1881ರ ಅನ್ವಯ ಅಕ್ಟೋಬರ್ 23ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

 

 

Please Share: