ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರ್ನಾಟಕ ಜಾನಪದ ಅಕಾಡೆಮಿಯ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ತಾಲೂಕಿನ ಅಮದಳ್ಳಿಯ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಪುರುಷೋತ್ತಮಗೌಡ ಆಯ್ಕೆಯಾಗಿದ್ದಾರೆ.

ಜಾನಪದ ಕಲೆಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡಿದ ಕಲಾವಿದರು ಹಾಗೂ ಕ್ಷೇತ್ರ ತಜ್ಞರನ್ನು ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಸಾಲಿನ ಪ್ರಶಸ್ತಿಗೆ ಪುರುಷೋತ್ತಮಗೌಡ ಆಯ್ಕೆಯಾಗಿರುವುದನ್ನು ಅಕಾಡೆಮಿಯ ಅಧ್ಯಕ್ಷರು ಹಾಗೂ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷೋತ್ತಮಗೌಡ ಅವರು ಈ ಹಿಂದೆ ಕರ್ನಾಟಕ ಸರ್ಕಾರದ ರಾಜ್ಯ ಯುವ ಪ್ರಶಸ್ತಿ (2001), ಜಿಲ್ಲಾ ಯುವ ಪ್ರಶಸ್ತಿ (2004, 2005), ರಾಜ್ಯ ಬಸವ ಜ್ಯೋತಿ ಪ್ರಶಸ್ತಿ (2009), ಜಿಲ್ಲಾ ಬೀದಿರಂಗ ಪುರಸ್ಕಾರ (2022), ಕನ್ನಡ ಜಾನಪದ ಸಿರಿ–ಜಾನಪದ ರಾಜ್ಯೋತ್ಸವ ಪ್ರಶಸ್ತಿ (2024) ಹಾಗೂ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ (2025) ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇವರು ಜಿಲ್ಲಾ ಕಾಂಗ್ರೆಸ್ ಸಹಕಾರ್ಯದರ್ಶಿಯಾಗಿ, ಅಮದಳ್ಳಿ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾಗಿ, ಕಾರವಾರ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರಾಗಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.


