ಕರಾವಳಿ ವಾಯ್ಸ್ ನ್ಯೂಸ್ 

ಬೆಂಗಳೂರು: ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಲು ವಿಳಂಬ ಮಾಡಿ, ನರ್ಸ್‌ವೊಬ್ಬರಿಗೆ ತಿಂಗಳಿಗೆ ಕೇವಲ ₹10 ಸಾವಿರ ಏಕೀಕೃತ ವೇತನ ಪಾವತಿಸುತ್ತಿರುವ ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರಿಗೆ ನಾಲ್ಕು ವಾರಗಳಲ್ಲಿ ಜಾತಿ ಮಾನ್ಯತಾ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

Banner Ad

ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾಥ್ ಲ್ಯಾಬ್ ವಿಭಾಗದಲ್ಲಿ ಸಿಬ್ಬಂದಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನುಸೂಯಾ ಪಿ. ಕೋಟಿ ಸಲ್ಲಿಸಿದ ರಿಟ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಧಾರವಾಡದ ಹೈಕೋರ್ಟ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಏಕಸದಸ್ಯ ಪೀಠದ ಆದೇಶ ಪಾಲನೆಯಾಗದಿರುವುದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಅನುಸೂಯಾ ಅವರಿಗೆ ಕಳೆದ ಒಂದು ವರ್ಷದಿಂದ ಪೂರ್ಣ ವೇತನ ಪಾವತಿಯಾಗಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಸಮಾನ ಕರ್ತವ್ಯ ನಿರ್ವಹಿಸುವ ಮತ್ತೊಬ್ಬ ಉದ್ಯೋಗಿಗೆ ₹36 ಸಾವಿರದಿಂದ ₹67,550ರವರೆಗೆ ವೇತನ ದೊರೆಯುತ್ತಿದ್ದರೆ, ಅರ್ಜಿದಾರರಿಗೆ ಕೇವಲ ₹10 ಸಾವಿರ ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

“ಸಾರ್ವಜನಿಕ ಕಚೇರಿಯಲ್ಲಿನ ಅಸಾಧಾರಣ ಆಡಳಿತಾತ್ಮಕ ಉದಾಸೀನತೆಯ ಕಥೆ ಇದಾಗಿದೆ” ಎಂದು ಕಿಡಿಕಾರಿದ ನ್ಯಾಯಪೀಠ, ಅಧಿಕಾರಿಗಳ ದೀರ್ಘಕಾಲದ ನಿಷ್ಕ್ರಿಯತೆಯಿಂದ ಉಂಟಾದ ಆರ್ಥಿಕ ಹೊರೆಯನ್ನು ಉದ್ಯೋಗಿಯೇ ಏಕೆ ಹೊರಬೇಕು ಎಂದು ಪ್ರಶ್ನಿಸಿತು. ಇದಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ನಷ್ಟದ ಮೊತ್ತವನ್ನು ವಸೂಲಿ ಮಾಡುವ ಸಾಧ್ಯತೆಯನ್ನೂ ಪ್ರಸ್ತಾಪಿಸಿತು.

ಒಬ್ಬ ಉದ್ಯೋಗಿಯ ಕಾನೂನುಬದ್ಧ ಹಕ್ಕುಗಳನ್ನು ನಿರಾಕರಿಸಿ, ಅವರನ್ನು ಶಾಶ್ವತ ಆರ್ಥಿಕ ಸಂಕಷ್ಟಕ್ಕೆ ತಳ್ಳಲಾಗದು. ರೋಗಿಗಳ ಆರೈಕೆಯಲ್ಲಿ ತೊಡಗಬೇಕಾದ ನರ್ಸ್ ತನ್ನ ಸೇವಾ ಹಿತಾಸಕ್ತಿಗಾಗಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಹೋರಾಡಬೇಕಾದ ಸ್ಥಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

“ವಿನಮ್ರ ಉದ್ಯೋಗಿಯೊಬ್ಬರನ್ನು ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿ ಕೋರ್ಟ್‌ಗೆ ಅಲೆಯುವಂತೆ ಮಾಡಿರುವುದು ಅಕ್ಷಮ್ಯ. ಇದಕ್ಕೆ ಕಾರಣರಾದವರ ಮೇಲೆ ಅನುಕರಣೀಯ ವೆಚ್ಚಗಳನ್ನು ಏಕೆ ವಿಧಿಸಬಾರದು?” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪ್ರಶ್ನಿಸಿದರು.

ಅರ್ಜಿದಾರರು ಮೊಗೇರ ಜಾತಿಗೆ ಸೇರಿದವರು ಎಂಬುದಕ್ಕೆ ಜಾತಿ ಮಾನ್ಯತಾ ಪ್ರಮಾಣಪತ್ರ ನೀಡಲು ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳೊಳಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ. ಪ್ರಕರಣದಲ್ಲಿ ಪ್ರತಿವಾದಿಗಳಾದ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಹಾಗೂ ಜಾತಿ ಸಿಂಧುತ್ವ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಅ. 29ಕ್ಕೆ ಮುಂದೂಡಿದೆ.

 

 

 

 

 

Please Share: