ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 171 ಸ್ಥಾನಗಳ ಪೈಕಿ 92 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಇದರೊಂದಿಗೆ ಜಿಪಂ–ತಾಪಂ ಚುನಾವಣಾ ಕಣಕ್ಕೆ ಇಳಿಯಲು ಮಹಿಳಾ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ ದೊರೆತಿದೆ.
ಜಿಲ್ಲೆಯ 53 ಜಿಪಂ ಸ್ಥಾನಗಳ ಪೈಕಿ 27 ಹಾಗೂ 118 ತಾಪಂ ಸ್ಥಾನಗಳ ಪೈಕಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ–1993ರ ಅನ್ವಯ ಮೀಸಲಾತಿ ನಿಗದಿಪಡಿಸಿದ್ದು, ಹಿಂದಿನ ಅಧಿಸೂಚನೆಗಳನ್ನು ರದ್ದುಗೊಳಿಸಿದೆ.
ಜಿಪಂನ 53 ಸ್ಥಾನಗಳಲ್ಲಿ ಸಾಮಾನ್ಯ 30, ಹಿಂದುಳಿದ ವರ್ಗ ‘ಅ’ 14, ‘ಬ’ 4, ಪರಿಶಿಷ್ಟ ಜಾತಿ 4 ಹಾಗೂ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ನಿಗದಿಯಾಗಿದೆ. ಇದರಲ್ಲಿ ಸಾಮಾನ್ಯ 15, ಹಿಂದುಳಿದ ವರ್ಗ ‘ಅ’ 7, ‘ಬ’ 2, ಪರಿಶಿಷ್ಟ ಜಾತಿ 2 ಹಾಗೂ ಪರಿಶಿಷ್ಟ ಪಂಗಡದ ಒಂದು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
ತಾಪಂನ 118 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ 13, ಪರಿಶಿಷ್ಟ ಪಂಗಡ 12, ಹಿಂದುಳಿದ ವರ್ಗ ‘ಅ’ 25, ‘ಬ’ 3 ಹಾಗೂ ಸಾಮಾನ್ಯ 65 ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿ 12, ಪರಿಶಿಷ್ಟ ಪಂಗಡ 12, ಹಿಂದುಳಿದ ವರ್ಗ ‘ಅ’ 15 ಹಾಗೂ ಸಾಮಾನ್ಯ 26 ಸ್ಥಾನಗಳು ಸೇರಿದಂತೆ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ರಾಜ್ಯಾದ್ಯಂತ 31 ಜಿಲ್ಲಾ ಪಂಚಾಯಿತಿಗಳಲ್ಲಿ ಒಟ್ಟು 1,129 ಸ್ಥಾನಗಳು ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಜಿಪಂನಲ್ಲಿ 571 ಹಾಗೂ ತಾಪಂನಲ್ಲಿ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರ ಚುರುಕುಗೊಳ್ಳುವ ಸಾಧ್ಯತೆ ಇದೆ.
ಸಂಪೂರ್ಣ ಲಿಸ್ಟ್ ಗಾಗಿ ಈ ಎರಡು ಲಿಂಕ್ ಕ್ಲಿಕ್ ಮಾಡಿ
ಜಿಲ್ಲಾ ಪಂಚಾಯತಿ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ
ತಾಲ್ಲೂಕು ಪಂಚಾಯತಿ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ_compressed


